ದಸರಾ ವಿಶೇಷ; ಉತ್ತರ ಕರ್ನಾಟಕ ಶೈಲಿಯ ತಾಲಿಪಟ್ಟು ರೆಸಿಪಿ ನಿಮಗಾಗಿ

Public TV
2 Min Read
Thalipattu

ಸರಾ ಬಂತೆಂದರೆ ಎಲ್ಲೆಡೆ ಸಂಭ್ರಮ ಸಡಗರ. ಮೈಸೂರಿನಲ್ಲಿ ಮಾತ್ರ ದಸರಾ ಆಚರಿಸದೇ ದೇಶದ ಹಲವೆಡೆ ಈ ಹಬ್ಬವನ್ನು ವಿವಿಧ ಸಂಪ್ರದಾಯದೊಂದಿಗೆ ಆಚರಿಸಲಾಗುತ್ತದೆ. ಈ ನವರಾತ್ರಿ ಹಬ್ಬಕ್ಕೆ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಹಾಗೆಯೇ ಉತ್ತರ ಕರ್ನಾಟಕದ ಮಂದಿ ಖಾರಪ್ರಿಯರಾಗಿದ್ದು, ದಸರಾ ಹಬ್ಬಕ್ಕೆ ತಾಲಿಪಟ್ಟು ಮಾಡುವುದು ವಿಶೇಷ. ಇವತ್ತಿನ ನಮ್ಮ ರೆಸಿಪಿಯಲ್ಲಿ ಉತ್ತರ ಕರ್ನಾಟಕದ ವಿಶೇಷ ಖಾದ್ಯ ಜೋಳದ ತಾಲಿಪಟ್ಟು ಯಾವ ರೀತಿ ಮಾಡುವುದೆಂದು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.

Thalipattu 1

ಬೇಕಾಗುವ ಸಾಮಗ್ರಿಗಳು:
ಜೋಳದ ಹಿಟ್ಟು – ಒಂದು ಕಪ್
ಗೋಧಿ ಹಿಟ್ಟು – 50 ಗ್ರಾಂ
ಕಡಲೆ ಹಿಟ್ಟು – 50 ಗ್ರಾಂ
ಜೀರಿಗೆ – ಅಗತ್ಯಕ್ಕೆ ತಕ್ಕಷ್ಟು
ಅರಶಿನ – ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಬೇಕಾದಷ್ಟು
ಹೆಚ್ಚಿದ ಹಸಿರು ಮೆಣಸಿನಕಾಯಿ – 3
ಖಾರದ ಪುಡಿ – ಅಗತ್ಯಕ್ಕೆ ತಕ್ಕಷ್ಟು
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಕ್ಯಾರೆಟ್ – 1
ಕರಿಬೇವು – ಸ್ವಲ್ಪ
ಹೆಚ್ಚಿದ ಕೊತ್ತಂಬರಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

Thalipattu

ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಗೆ ಜೋಳದ ಹಿಟ್ಟು, ಗೋಧಿ ಹಿಟ್ಟು, ಕಡಲೆ ಹಿಟ್ಟು, ಜೀರಿಗೆ, ಅರಶಿನ, ಉಪ್ಪು, ಹಸಿಮೆಣಸಿನ ಕಾಯಿ, ಖಾರದ ಪುಡಿ, ಈರುಳ್ಳಿ, ಕೊತ್ತಂಬರಿ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಕಲಸಿಕೊಳ್ಳಿ.
* ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಕಲಸಿದ ಬಳಿಕ ಹತ್ತು ನಿಮಿಷ ಹಾಗೆಯೇ ಬಿಡಿ.
* ಇದಾದ ಬಳಿಕ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ.
* ನಂತರ ಬಾಳೆ ಎಲೆಯ ಮೇಲೆ ಎಣ್ಣೆ ಹಚ್ಚಿಕೊಂಡು ಅದರ ಮೇಲೆ ಉಂಡೆಯನ್ನಿಟ್ಟು ಹಿಟ್ಟನ್ನು ರೊಟ್ಟಿಯ ರೀತಿ ತಟ್ಟಿಕೊಳ್ಳಿ.
* ಈಗ ಗ್ಯಾಸ್ ಮೇಲ್ ಕಾವಲಿ ಕಾಯಲು ಇಟ್ಟು ಕಾದ ಬಳಿಕ ತಟ್ಟಿದ ತಾಲಿಪಟ್ಟನ್ನು ಕಾವಲಿಗೆ ಹಾಕಿ ಎರಡೂ ಕಡೆ ಕಾಯಿಸಿಕೊಂಡರೆ ಜೋಳದ ತಾಲಿಪಟ್ಟು ಸವಿಯಲು ಸಿದ್ಧ.
* ಇದಕ್ಕೆ ಕಾಯಿ ಚಟ್ನಿ, ಹುರಿಗಡಲೆ ಚಟ್ನಿ, ಟೊಮೆಟೋ ಚಟ್ನಿ ಪರ್ಫೆಕ್ಟ್ ಕಾಂಬಿನೇಷನ್ ಎನ್ನಬಹುದು.

Share This Article