Connect with us

Cinema

ಕಷ್ಟದಲ್ಲಿದ್ದಾಗ ಯಾರೂ ಇರಲಿಲ್ಲ ಅಂದ್ರು ಚಂದನ್ ಶೆಟ್ಟಿ

Published

on

ಬೆಂಗಳೂರು: ಗೆಲುವಿಗೆ ನೂರು ಜನ ಅಪ್ಪಂದಿರು ಅನ್ನೋ ಗಾದೆಯಿದೆಯಲ್ಲಾ? ಹಾಗೆ ಒಬ್ಬ ವ್ಯಕ್ತಿ ಗೆದ್ದ ನಂತರ ಹತ್ತಾರು ಜನ ಅದಕ್ಕೆ ನಾನೇ ಕಾರಣ, ನನ್ನಿಂದಲೇ ಆಗಿದ್ದು ಅಂತಾ ರಾಗ ತೆಗೆಯೋದು ಮಾಮೂಲು.

ಈಗ ಚಂದನ್ ಶೆಟ್ಟಿ ಅನ್ನೋ ಯುವಕ ಬಿಗ್ ಬಾಸ್ ಶೋ ಗೆದ್ದಿದ್ದು ಮಾತ್ರವಲ್ಲದೆ, ಕನ್ನಡದ ರ‍್ಯಾಪ್ ಹಾಡುಗಳ ಮೂಲಕ ಜಗತ್ತಿಗೇ ಗೊತ್ತಾಗುತ್ತಿದ್ದಾರೆ. ಥ್ರೀ ಪೆಗ್ ಅನ್ನೋ ಹಾಡು ಚಂದನ್ ಗೆ ಬೇರೆ ಲೆವೆಲ್ಲಿನ ವರ್ಚಸ್ಸು ತಂದುಕೊಟ್ಟಿದೆ ಅನ್ನೋದು ನಿಜ. ಥ್ರೀ ಪೆಗ್ ಹಿಟ್ ಆಗಿ, ಚಂದನ್ ಅವಕಾಶಗಳ ಮೇಲೆ ಅವಕಾಶ ಪಡೆಯುತ್ತಿದ್ದಂತೇ ಒಂದಷ್ಟು ಮಂದಿಯ ಕಣ್ಣು ಕೆಂಪಾಗಿದ್ದು ಸುಳ್ಳಲ್ಲ.

ಇತ್ತೀಚೆಗೆ ಥ್ರೀ ಪೆಗ್ ಹಾಡಿನ ಮ್ಯೂಸಿಕ್ ಡೈರೆಕ್ಟರ್ ಆಗಿದ್ದ ವಿಜೇತ್ ಕೃಷ್ಣ ‘ನನ್ನ ಹೆಸರು ಹೆಚ್ಚು ಪ್ರಸ್ತಾಪವಾಗಲೇ ಇಲ್ಲ. ಜೊತೆಗೆ ನನಗೆ ಆ ಪ್ರಾಜೆಕ್ಟ್ ಇಂದ ಬಂದಿದ್ದು ಕೇವಲ ಹದಿನೈದು ಸಾವಿರ ರೂಪಾಯಿ ಮಾತ್ರ’ ಎಂದಿದ್ದರು. ಈಗ ವಿಜೇತ್ ಮಾತಿಗೆ ಪ್ರತಿಕ್ರಿಯಿಸಿರುವ ಚಂದನ್ ಶೆಟ್ಟಿ `ನಾವು ಅವರ ಹೆಸರನ್ನು ಟೈಟಲ್ ಕಾರ್ಡ್ ನಲ್ಲಿ ಹಾಕಿದ್ದೆವು. ಇನ್ನು ಹಣ ಬರೀ ಹದಿನೈದು ಸಾವಿರ ಅನ್ನೋದು ಸುಳ್ಳು. ನಿಖರವಾಗಿ ಇಷ್ಟೇ ಅಂತಾ ಹೇಳಲು ನನಗೆ ಇಷ್ಟ ಇಲ್ಲ. ಆದರೆ ಹದಿನೈದು ಸಾವಿರಕ್ಕಿಂತಾ ಹೆಚ್ಚು ಹಣ ವಿಜೇತ್ ಗೆ ಸಂದಾಯವಾಗಿದೆ. ಇನ್ನು ಅವರ ಹೆಸರು ಯಾಕೆ ಹೆಚ್ಚು ಪ್ರಸ್ತಾಪವಾಗಲಿಲ್ಲ ಅನ್ನೋದಕ್ಕೆ ನನ್ನ ಬಳಿ ಉತ್ತರವಿಲ್ಲ. ನಾನು ಥ್ರೀ ಪೆಗ್ ಹಾಡನ್ನು ರೆಡಿ ಮಾಡಿಟ್ಟುಕೊಂಡು ಅದನ್ನು ಶೂಟ್ ಮಾಡಲು ಎಷ್ಟೆಲ್ಲಾ ಕಷ್ಟ ಪಟ್ಟಿದ್ದೀನಿ. ಎಷ್ಟೋ ವರ್ಷದ ನಂತರ ಕಡೆಗೆ ನಿರ್ಮಾಪಕರು ಸಿಕ್ಕ ಮೇಲೆ ನನ್ನ ಕನಸು ಕೈಗೂಡಿತು. ನಾನು ಕಷ್ಟದಲ್ಲಿದ್ದಾಗ ಯಾರೂ ಬರಲಿಲ್ಲ. ಮೇಲಾಗಿ ಆ ಆಲ್ಬಂ ಹಾಡಿಗೆ ನಿರ್ಮಾಪಕರಾದ ದಿನೇಶ್ ಅವರೂ ಇದ್ದಾರೆ. ಎಲ್ಲದಕ್ಕೂ ನಾನೊಬ್ಬನೇ ಪ್ರತಿಕ್ರಿಯಿಸೋದು ಅಷ್ಟು ಸರಿ ಹೊಂದುವುದಿಲ್ಲ’ ಎಂಬುದಾಗಿ ಹೇಳಿದ್ದಾರೆ.

ಚಂದನ್ ಶೆಟ್ಟಿಗೆ ತೀರಾ ಅಹಂ ಬಂದಿದೆ. ಮಾಧ್ಯಮದವರ ಕರೆಯನ್ನೂ ಸ್ವೀಕರಿಸೋದಿಲ್ಲ. ಅವರ ತಮ್ಮ ಫೋನ್ ತೆಗೆದು ‘ಅವರು ಬ್ಯುಸಿ ಇದ್ದಾರೆ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಅನ್ನೋ ಆರೋಪವಿದೆ. ಆದರೆ ಅದಕ್ಕೂ ಉತ್ತರಿಸಿರುವ ಚಂದನ್ ನಾನು ಬ್ಯುಸಿ ಇದ್ದೀನಿ ಅಂತಾ ಮೀಡಿಯಾದವರಿಗೇ ಹೇಳುವಷ್ಟು ಬ್ಯುಸಿಯಾಗಿಲ್ಲ. ನಾನು ಬಿಗ್ ಬಾಸ್ ನಿಂದ ಬಂದ ನಂತರ ಸಾಕಷ್ಟು ಸಮಯ ಟ್ರಾವಲಿಂಗಲ್ಲೇ ಇದ್ದೆ. ಅಲ್ಲಿ ಫೋನ್ ರಿಸೀವ್ ಮಾಡದೇ ಇದ್ದದ್ದು ಇಷ್ಟೆಲ್ಲಾ ಅಪಾರ್ಥಕ್ಕೆ ಕಾರಣವಾಗಿದೆ ಎಂದು ಹೇಳಿ ಸದ್ಯ ಅವರ ಮೇಲಿರುವ ಆರೋಪಗಳನ್ನು ಡಬ್ಬ ಬಡಿದಷ್ಟೇ ಸಲೀಸಾಗಿ ತಳ್ಳಿಹಾಕಿದ್ದಾರೆ!

Click to comment

Leave a Reply

Your email address will not be published. Required fields are marked *