ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ರಂಗು ಹೆಚ್ಚುತ್ತಿದೆ. ರಾಜ್ಯದ 3 ಪ್ರಮುಖ ಪಕ್ಷಗಳಾದ ಬಿಜೆಪಿ (BJP), ಜೆಡಿಎಸ್ (JDS), ಕಾಂಗ್ರೆಸ್‍ನ (Congress) ಅನೇಕ ಘಟಾನುಗಟಿ ನಾಯಕರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಬೆಂಬಲಿಗರನ್ನು ಒಟ್ಟುಗೂಡಿಸಿ, ಬೃಹತ್ ರ‍್ಯಾಲಿಗಳನ್ನು ನಡೆಸುವ ಮೂಲಕ ಶಕ್ತಿಪ್ರದರ್ಶಿಸಿದ್ದಾರೆ.
ಯಾರ‍್ಯಾರು ಎಲ್ಲೆಲ್ಲಿ ನಾಮಪತ್ರ ಸಲ್ಲಿಕೆ?:
ಆರ್. ಅಶೋಕ್: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಆರ್. ಅಶೋಕ್ (R Ashok) ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅದಾದ ಬಳಿಕ ದೇವೇಗೌಡ ಪೆಟ್ರೋಲ್ ಬಂಕ್‍ನಿಂದ ಕಿಮ್ಸ್ ಕಾಲೇಜಿನವರೆಗೂ ಮೆರವಣಿಗೆ ಮೂಲಕ ಹೊರಟು ಬನಶಂಕರಿ ಎರಡನೇ ಹಂತದಲ್ಲಿ ಇರುವ ಆರ್‍ಓ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ವೇಳೆ ಸಂಸದ ತೇಜಸ್ವಿ ಸೂರ್ಯ ಸಾಥ್ ನೀಡಿದರು. ಈ ವೇಳೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.
Advertisement
Advertisement
ಅಶ್ವಥ್ ನಾರಾಯಣ್: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಸರ್ಕಲ್ ಮಾರಮ್ಮ ದೇಗುಲದಿಂದ ಭರ್ಜರಿ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದರು. ಇನ್ನು ನಾಮಪತ್ರ ಸಲ್ಲಿಕೆಗೂ ಮುನ್ನ ಮಲ್ಲೇಶ್ವರಂನ ಹಲವು ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಮನೆಯಲ್ಲಿಯೂ ವಿಶೇಷ ಹೋಮ ನಡೆಸಲಾಯಿತು.
Advertisement
Advertisement
ಸುಧಾಕರ್: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ಕುಟುಂಬ ಸಮೇತರಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಅದಕ್ಕೂ ಮೊದಲು ಮನೆಯಲ್ಲೇ ದೇವರ ಪೂಜೆ ಜೊತೆಗೆ ತಾಯಿ ಪೋಟೋಗೆ ನಮನ ಸಲ್ಲಿಸಿದರು. ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.
ಡಿ.ಕೆ. ಶಿವಕುಮಾರ್: ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೃಹತ್ ಮೆರವಣಿಗೆ ನಡೆಸಿ ನಂತರ ನಾಮಪತ್ರ ಸಲ್ಲಿಸಿದರು. ಈ ವೇಳೆ ಅಭಿಮಾನಿಗಳು ಡಿಕೆ ಶಿವಕುಮಾರ್‍ಗೆ ಕನಕಪುರದ ಕೆಎಸ್‍ಎಸ್ ಸರ್ಕಲ್‍ನಲ್ಲಿ ಮುಸಂಬಿ ಹಾರವನ್ನು ಹಾಕಿ ಮುಂದಿನ ಸಿಎಂ ಎಂದು ಘೋಷಣೆ ಕೂಗಿದರು. ಅಷ್ಟೇ ಅಲ್ಲದೇ ಕನಕಪುರದ ಟಿಬಿ ಸರ್ಕಲ್‍ನಲ್ಲಿ ಅಭಿಮಾನಿಗಳು ಡಿಕೆಶಿಗೆ ಸೇಬಿನ ಹಾರ ಹಾಕಿ ಸನ್ಮಾನಿಸಿದರು.
ಹೆಚ್.ಡಿ ಕುಮಾರಸ್ವಾಮಿ: ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿಯಾದ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಕಾರ್ಯಕರ್ತರೊಂದಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಹಳೇ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಂಡು ಬಂತು. ತಾಲೂಕು ಕಚೇರಿಗೆ ಆಗಮಿಸಿ ಬೆಂಬಲಿಗರೊಡನೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ಕೇವಲ 5 ಜನಕ್ಕೆ ಮಾತ್ರ ಅವಕಾಶ ನೀಡಲಾಯಿತು.
ವಿಜಯೇಂದ್ರ: ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರು ದಿಢೀರಾಗಿ ಇಂದೇ ನಾಮಪತ್ರ ಸಲ್ಲಿಸಿದರು. ಶಿಕಾರಿಪುರದ ತಹಶೀಲ್ದಾರ್ ಕಚೇರಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ಮೊದಲು 19ರಂದು ನಾಮಪತ್ರ ಸಲ್ಲಿಕೆಗೆ ನಿಗದಿಯಾಗಿತ್ತು. ಆದರೆ ಇಂದು ಸಾಂಕೇತಿಕವಾಗಿ ದಿಢೀರ್ ನಾಮಪತ್ರ ಸಲ್ಲಿಸಿದ್ದು, ಏ. 19ರಂದು ಮತ್ತೊಮ್ಮೆ ಬೃಹತ್ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ: ರಾಮನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ತಾಲೂಕು ಕಚೇರಿಗೆ ತಾಯಿ ಅನಿತಾ ಕುಮಾರಸ್ವಾಮಿ ಜೊತೆ ಬಂದು ನಾಮಪತ್ರ ಸಲ್ಲಿಸಿದರು. ಇನ್ನೂ ನಿಖಿಲ್ ನಾಮಪತ್ರ ಸಲ್ಲಿಕೆ ಹಿನ್ನೆಲೆ ಮಾಜಿ ಸಿಎಂ ಹೆಚ್‍ಡಿಕೆ ರೋಡ್ ಶೋ ನಡೆಸಿದರು.
ಭಾಸ್ಕರ್ ರಾವ್: ಚಾಮರಾಜಪೇಟೆ ಕ್ಷೇತ್ರದಿಂದ ಬಿಜೆಪಿಯಿಂದ ಭಾಸ್ಕರ್ ರಾವ್ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಲಹರಿ ವೇಲು ಉಪಸ್ಥಿತರಿದ್ದರು.
ಹೆಚ್.ಡಿ. ರೇವಣ್ಣ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ನಾಮಪತ್ರ ಸಲ್ಲಿಸಿದರು. ಕುಟುಂಬ ಸಮೇತರಾಗಿ ಹೊಳೆನರಸೀಪುರದ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ರೇವಣ್ಣಗೆ ಪತ್ನಿ ಭವಾನಿ, ಪುತ್ರರಾದ ಸೂರಜ್, ಪ್ರಜ್ವಲ್ ರೇವಣ್ಣ ಸಾಥ್ ನೀಡಿದರು. ಹೊಳೆನರಸೀಪುರ ಕ್ಷೇತ್ರದಲ್ಲಿ ಏಳನೇ ಬಾರಿ ನಾಮಪತ್ರ ಸಲ್ಲಿಸಿದರು. ಐದು ಬಾರಿ ಹೊಳೆನರಸೀಪುರದಿಂದ ಶಾಸಕರಾಗಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮೊದಲು ಹೊಳೆನರಸೀಪುರದಲ್ಲಿರುವ ಶ್ರೀಲಕ್ಷ್ಮಿ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ದೇವಾಲಯದ ಆವರಣದಿಂದ ಹೊಳೆನರಸೀಪುರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಇದನ್ನೂ ಓದಿ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ – ಪೊಲಿಟಿಕಲ್ ಸೂಸೈಡ್ ಎಂದ ಸುಧಾಕರ್
ಹೋಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ, ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಪಿ.ಸ್ವರೂಪ್ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಪ್ರೀತಂಗೌಡ, ಬಾಗಲಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ವೈ.ಮೇಟಿ, ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಕುಮಟಳ್ಳಿ ಸೇರಿದಂತೆ ಅನೇಕ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್ ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ: ಬಿಜೆಪಿ ತೊರೆದ ನಾಯಕರಿಗೆ ಸಿಎಂ ಟಾಂಗ್