ನೊಯ್ಡಾ: ವೈದ್ಯರ ಎಡವಟ್ಟಿನಿಂದ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಸಜೀವವಾಗಿ ದಹನವಾಗಿದ್ದು, ಚಿತೆಯ ಮೇಲೆ ಮಲಗಿಸಿದಾಗ ಮಹಿಳೆ ಉಸಿರಾಡುತ್ತಿದ್ದರು ಅಂತಾ ಸಂಬಂಧಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 21 ವರ್ಷದ ಮಹಿಳೆಯನ್ನು ಉತ್ತರಪ್ರದೇಶದ ನೊಯ್ಡಾದಲ್ಲಿರುವ ಶಾರದಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಭಾನುವಾರ ರಾತ್ರಿ 11.45ರ ಸುಮಾರಿಗೆ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದ್ದರು. ಅಂತೆಯೇ ಮಹಿಳೆ ಶವವನ್ನು ಸೋಮವಾರ ಬೆಳಗ್ಗೆ ಪತಿಗೆ ಹಸ್ತಾಂತರಿಸಿದ್ದು, ಕುಟುಂಬದವರು ಶವಸಂಸ್ಕಾರ ಮಾಡಿದ್ದರು.
ಆದ್ರೆ ಇತ್ತ ಮಹಿಳೆಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ಸಹೋದರ ಆಲಿಗಢ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಅಂತ್ಯಸಂಸ್ಕಾರವನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಆದ್ರೆ ಅದಾಗಲೇ ಮಹಿಳೆಯ ದೇಹ ಶೇ.70ರಷ್ಟು ಸುಟ್ಟು ಹೋಗಿತ್ತು. ಈ ಅರ್ಧ ಸುಟ್ಟ ದೇಹವನ್ನೇ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದರು. ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ವೇಳೆ ಮಹಿಳೆ ಉಸಿರಾಟದ ತೊಂದರೆಯಿಂದ ಸತ್ತಿಲ್ಲ. ಸಜೀವ ದಹನದಿಂದಾದ ಆಘಾತದಿಂದ ಮೃತಪಟ್ಟಿರುವುದಾಗಿ ದೃಢಪಟ್ಟಿದೆ.
- Advertisement
ಇದೀಗ ಘಟನೆ ಸಂಬಂಧ ಮೃತ ಮಹಿಳೆಯ ಪತಿ ಮತ್ತು ಆತನ ಕುಟುಂಬದ 10 ಮಂದಿಯ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆದ್ರೆ ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ.
- Advertisement
ಇತ್ತ ಮಹಿಳೆ ಮೃತಪಟ್ಟಿದ್ದಾರೆ ಅಂತಾ ಘೋಷಣೆ ಮಾಡಿದ್ದ ಶಾರದಾ ಆಸ್ಪತ್ರೆ ಮಾತ್ರ ಮಹಿಳೆಗೆ ಉಸಿರಾಟದ ತೊಂದರೆ ಹೆಚ್ಚಾಗಿ ಕಂಡುಬಂದಿರುವುದರಿಂದ ಆಕೆಯನ್ನು ಉಳಿಸಿಕೊಳ್ಳಲು ಇಲ್ಲಿಯ ವೈದ್ಯರು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದ್ರೆ ಕಡೆಗೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಆಕೆ ಅದೇ ತೊಂದರೆಯಿಂದ ಸಾವನ್ನಪ್ಪಿದ್ದಾಳೆ ಅಂತಾ ಆಸ್ಪತ್ರೆಯ ವಕ್ತಾರರು ಹೇಳಿದ್ದಾರೆ.