ವಿಜಯಪುರ: ಕೆಎಂಎಫ್ ಗಾದಿಗಾಗಿ ನಾಲ್ವರು ಕಾಂಗ್ರೆಸ್ ನಿರ್ದೇಶಕರ ಹೈಜಾಕ್ ಆರೋಪಕ್ಕೆ ಸಂಬಂಧಿಸಿದಂತೆ ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಎಂದು ವಿಜಯಪುರ ಕೆಎಂಎಫ್ ನಿರ್ದೇಶಕ ಶ್ರೀಶೈಲ್ ಪಾಟೀಲ್ ಸ್ಪಷ್ಟನೆ ನಿಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ನನ್ನ ವೈಯಕ್ತಿಕ ಕೆಲಸಗಳಿಗಾಗಿ ಓಡಾಡುತ್ತಿದ್ದೇನೆ. ನನ್ನ ಪತ್ನಿಯ ತವರು ಮನೆ ಕಲಬುರಗಿಯಲ್ಲಿದೆ. ಹೀಗಾಗಿ ನಾನು ಇಲ್ಲಿದ್ದೇನೆ ಎಂದು ಹೇಳುವ ಮೂಲಕ ಆರೋಪಕ್ಕೆ ತೆರೆ ಎಳೆದಿದ್ದಾರೆ.
ಏನಿದು ಪ್ರಕರಣ?
ಮೈತ್ರಿ ಧರ್ಮದ ಪ್ರಕಾರ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನ ಕಾಂಗ್ರೆಸ್‍ಗೆ ಬಿಟ್ಟು ಕೋಡೋದಾಗಿ ಭರವಸೆ ನೀಡಿದ್ದ ಜೆಡಿಎಸ್ ನಾಯಕರು ಇದೀಗ ಸರ್ಕಾರ ಬಿಳುತ್ತಿದ್ದಂತೆಯೇ ಉಲ್ಟಾ ಹೊಡೆದಿದ್ದಾರೆ. ಮಾಜಿ ಸಚಿವ ರೇವಣ್ಣ, ಮಂತ್ರಿಗಿರಿ ಹೋಯ್ತು, ಹೀಗಾಗಿ ಕೆಎಂಎಫ್ ಅಧ್ಯಕ್ಷ ಗಾದಿಯಾದ್ರೂ ಇರಲಿ ಎಂದು ಹಠಕ್ಕೆ ಬಿದಿದ್ದಾರೆ. ಹೀಗಾಗಿ ಕೆಎಂಎಫ್‍ನ ನಾಲ್ವರು ಕಾಂಗ್ರೆಸ್ ನಿರ್ದೇಶಕರನ್ನು ಹೈಜಾಕ್ ಮಾಡಿ ಹೈದಾರಾಬಾದ್‍ಗೆ ಶಿಫ್ಟ್ ಮಾಡಿದ್ದಾರೆಂದು ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಆರೋಪಿಸಿದ್ದರು.
ಮಂಗಳೂರು ವಿಭಾಗದ ದಿವಾಕರ್ ಶೆಟ್ಟಿ, ಧಾರವಾಡದ ಹನುಮಂತ ಗೌಡ, ಹಿರೇಗೌಡ, ವಿಜಯಪುರ ಶ್ರೀಶೈಲಗೌಡ ಪಾಟೀಲ್, ಶಿವಮೊಗ್ಗದ ವೀರಭದ್ರ ಬಾಬುರನ್ನು ಹೈಜಾಕ್ ಮಾಡಿದ್ದಾರೆ. ಈ ವಿಚಾರ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೂ ಗುರಿಯಾಗಿದ್ದು, ಸಿದ್ದರಾಮಯ್ಯ ಎಂಟ್ರಿಯಾಗುವ ಸಾಧ್ಯತೆ ಇದೆ. ಕೆಎಂಎಫ್‍ನಲ್ಲಿ ಒಟ್ಟು 12 ಜನ ನಿರ್ದೇಶಕರಿದ್ದಾರೆ. ಅದರಲ್ಲಿ 3 ಜೆಡಿಎಸ್ ಮತ್ತು 9 ಕಾಂಗ್ರೆಸ್ ನಿರ್ದೇಶಕರು. ಹಾಗೆಯೇ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅಮರನಾಥ ಜಾರಕಿಹೊಳಿ ಕೂಡ ಓರ್ವ ನಿರ್ದೇಶಕರಾಗಿದ್ದಾರೆ. ಇದೀಗ ಕಾಂಗ್ರೆಸ್‍ನ 4 ನಿರ್ದೇಶಕರನ್ನು ರೇವಣ್ಣ ತನ್ನೆಡೆಗೆ ಎಳೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು.