ಹಾಸನ: ನಗರದಲ್ಲಿ ದೋಸ್ತಿ ಸರ್ಕಾರದ ನಾಯಕರ ನಡುವೆ ಮಾತಿನ ಸಮರ ಮುಂದುವರಿದಿದೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬರ ನಿರ್ವಹಣಾ ಸಂಪುಟ ಸಮಿತಿ ಸಭೆ ಇದಕ್ಕೆ ಸಾಕ್ಷಿಯಾಗಿದೆ.
ಸಚಿವ ಎಚ್.ಡಿ. ರೇವಣ್ಣ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಮಧ್ಯೆ ವಾಕ್ಸಮರ ಏರ್ಪಟ್ಟಿತ್ತು. ಕಳೆದ ಹತ್ತು ವರ್ಷದಿಂದ ಹಾಸನ ಅಭಿವೃದ್ಧಿ ಕಾಣಲಿಲ್ಲ ಎನ್ನುವ ರೇವಣ್ಣ ಮಾತಿಗೆ ಕೆರಳಿದ ಗೋಪಾಲಸ್ವಾಮಿ, ನಮ್ಮ ಸಿದ್ದರಾಮಯ್ಯ ಸರ್ಕಾರದಲ್ಲಿ ಹಾಗಾದ್ರೆ ಏನೂ ಆಗಲಿಲ್ಲವೇ ಎಂದು ಗರಂ ಆದ್ರು. ರೀ ಗೋಪಾಲ್, ಸುಮ್ನೆ ಕೂತ್ಕಳ್ರಿ ಏನಾಗಿದೆ ಅಂತ ನನಗೆ ಗೊತ್ತಿದೆ ಎಂದು ಏರು ಧ್ವನಿಯಲ್ಲಿಯೇ ರೇವಣ್ಣ ಪ್ರತ್ಯುತ್ತರ ನೀಡಿದ್ರು. ಇವರಿಬ್ಬರ ಈ ಮಾತಿನ ಸಮರ ಸಭೆಯಲ್ಲಿ ಕೆಲಕಾಲ ಗೊಂದಲಕ್ಕೆ ಕಾರಣವಾಯಿತು.
Advertisement
Advertisement
ಸಂಪುಟ ಉಪ ಸಮಿತಿ ಅಧ್ಯಕ್ಷ ಕೃಷ್ಣಬೈರೇಗೌಡ ನೇತೃತ್ವದ ಸಚಿವರ ತಂಡ ಹಾಸನ ಜಿಲ್ಲೆಯ ಬರಪೀಡಿತ ಪ್ರದೇಶಕ್ಕೆ ಶುಕ್ರವಾರ ಭೇಟಿ ಮಾಡಿತ್ತು, ನಂತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಸೇರಿದಂತೆ ಸಚಿವರುಗಳಾದ ಕೃಷ್ಣಬೈರೇಗೌಡ, ಸಿ.ಎಸ್. ಪುಟ್ಟರಾಜು, ಯು.ಟಿ ಖಾದರ್, ಜಯಮಾಲಾ ಭಾಗವಹಿಸಿದ್ದರು. ಇವರ ಜತೆಗೆ ಜಿಲ್ಲೆಯ ಎಲ್ಲಾ ಶಾಸಕರೂ ಕೂಡಾ ಭಾಗವಹಿಸಿದ್ದರು.
Advertisement
ಸಭೆಯ ಮಧ್ಯೆ ಹಾಸನ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಎದ್ದು, ಕ್ಷೇತ್ರಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಇಡುತ್ತಿದ್ದರು. ಪ್ರೀತಂ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಎಚ್.ಡಿ ರೇವಣ್ಣ ನೋಡಿ ಅಣ್ಣಾ, ನನಗೆ ನಮ್ಮ ಜಿಲ್ಲೆಯ ಅಭಿವೃದ್ಧಿ ಮಾತ್ರ ಮುಖ್ಯ. ಕಳೆದ ಹತ್ತು ವರ್ಷಗಳಿಂದ ನಮ್ಮ ಜಿಲ್ಲೆ ಅಭಿವೃದ್ಧಿ ಕಂಡಿರಲಿಲ್ಲ. ಈಗ ಅಭಿವೃದ್ಧಿಯಾಗಬೇಕಷ್ಟೇ ಎಂದ್ರು.
Advertisement
ರೇವಣ್ಣರ ಈ ಮಾತಿಗೆ ಕೆರಳಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ರೇವಣ್ಣ ಅವರೇ, ನಮ್ಮ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೂ ಕೆಲಸ ಆಗಿದೆ. ನೀವು ಹಾಗೆ ಹೇಳಬೇಡಿ. ಇದು ಸಮ್ಮಿಶ್ರ ಸರ್ಕಾರ ಎಂದು ಗರಂ ಆದ್ರು. ಇದರಿಂದ ಸಿಟ್ಟಾದ ರೇವಣ್ಣ ಏನು ಕೆಲಸ ಆಗಿದೆ ಹೇಳ್ರಿ ಎಂದು ಏರು ಧ್ವನಿಯಲ್ಲಿಯೇ ಉತ್ತರ ಕೊಟ್ರು.
ತಮ್ಮ ಮಾತನ್ನು ಮುಂದುವರಿಸಿದ ಗೋಪಾಲಸ್ವಾಮಿ, ಹಾಸನದಲ್ಲಿ ಬೇಕಾದಷ್ಟು ಆಗಿದೆ ಎಂದು ಪ್ರತ್ಯುತ್ತರ ನೀಡಿದ್ರು. ಬರೀ ಎಂಜಿನಿಯರಿಂಗ್ ಕಾಲೇಜ್ ನ ಡೋರ್ ರಿಪೇರಿ ಮಾಡಲೂ ನಿಮ್ಮಿಂದ ಸಾಧ್ಯವಾಗಲಿಲ್ಲ, ಈಗ ಕಾಲೇಜು ಮುಚ್ಚೋ ಹಂತಕ್ಕೆ ಬಂದಿದೆ. ನನಗೆ ಗೊತ್ತು ಸುಮ್ನೆ ಕೂತ್ಕೋಳ್ರೀ ಎಂದು ಗೋಪಾಲಸ್ವಾಮಿ ಅವರಿಗೆ ರೇವಣ್ಣ ಗದರಿದರು. ಹೀಗೆ ಇಬ್ಬರ ನಡುವೆಯೂ ವಾಗ್ವಾದ ನಡೆಯಿತು. ಈ ವೇಳೆ ಮಧ್ಯೆ ಪ್ರವೇಶಿದ ಸಚಿವ ಕೃಷ್ಣಬೈರೇಗೌಡ ಅವರು, ರೇವಣ್ಣ ಅವರಿಗೆ ಇನ್ನೂ ಹೆಚ್ಚಿನ ಕೆಲಸ ಆಗಬೇಕಿತ್ತು ಅನ್ನೋ ಆಸೆ ಇದೆ ಅನ್ನಿಸುತ್ತದೆ ಎನ್ನುವ ಮೂಲಕ ಇಬ್ಬರ ಜಗಳಕ್ಕೆ ತೇಪೆ ಹಚ್ಚಿದ್ರು. ಜಗಳ ತಣ್ಣಗಾದ ಮೇಲೆ ರೀ ಪ್ರೀತಂ ನೀನು ಬೆಂಕಿ ಹಚ್ಚಿ ತಮಾಷೆ ನೋಡ್ತಿಯಾ ಕಣಪ್ಪಾ ಅಂತಾ ಕೃಷ್ಣಬೈರೇಗೌಡ್ರು ಪ್ರೀತಂಗೆ ಟಾಂಗ್ ನೀಡಿದ್ರು.
ಒಟ್ಟಿನಲ್ಲಿ ಇಬ್ಬರ ಜಗಳವನ್ನು ನೋಡ್ತಾ ಇದ್ದ ಕಾಂಗ್ರೆಸ್ ನ ಸಚಿವರುಗಳು ಅವರಿಗೂ ಹೇಳಲಾಗದೇ, ಇವರಿಗೂ ಹೇಳಲಾಗದೇ ಸುಮ್ನೆ ಜಗಳ ನೋಡ್ತಾ ಕೂತಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಇಬ್ಬರ ನಡುವೆ ಹೊಂದಾಣಿಕೆಯೇ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದ್ದು, ಈ ಇಬ್ಬರ ಮಧ್ಯೆ ಅಧಿಕಾರಿಗಳು ಮಾತ್ರ ಬೆಸತ್ತು ಹೋಗಿರೋದಂತೂ ಸುಳ್ಳಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv