ಕೊಪ್ಪಳ: ಕಳೆದ ಒಂದು ವಾರದಿಂದ ಜಿಲ್ಲಾಸ್ಪತ್ರೆಯಲ್ಲಿ ನೀರಿಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಬಾಣಂತಿಯರಿಗೆ ಹಾಗೂ ಹಸುಗೂಸುಗಳಿಗೆ ಸ್ನಾನ ಮಾಡಿಸಿಲು ಸಹ ನೀರಿನ ಸಮಸ್ಯೆ ಬಿಗಡಾಯಿಸಿದೆ.
ನಗರದ ಜಿಲ್ಲಾಸ್ಪತ್ರೆಗೆ ಸರಬರಾಜು ಆಗುತ್ತಿದ್ದ ನೀರಿನ ಬೋರ್‍ವೆಲ್‍ಗಳು ಅಂತರ್ಜಲಮಟ್ಟ ಕುಸಿತ ಕಂಡು ಕೈಕೊಟ್ಟಿವೆ. ಹೀಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಈಗ ಹನಿ ನೀರಿಲ್ಲ. ಜೊತೆಗೆ ರೋಗಿಗಳು ಶೌಚಾಲಯಕ್ಕೆ ಹೋಗುವಷ್ಟು ನೀರು ಸಹ ಪೂರೈಕೆ ಆಗ್ತಿಲ್ಲ ಎಂದು ರೋಗಿಗಳ ಸಂಬಂಧಿಗಳು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿರೋ ಶೌಚಾಲಯಗಳಿಗೆ ನೀರಿಲ್ಲದೇ ದುರ್ವಾಸನೆ ಬರುತ್ತಿದೆ. ರೋಗಿ, ಹಾಗೂ ರೋಗಿ ಸಂಬಂಧಿಕರು ಹೊರಗಡೆ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಬಂದಿದೆ. ಒಂದು ವಾರದಿಂದ ಸ್ನಾನ ಮಾಡದೇ ಇರುವ ರೋಗಿಗಳು ಸಹ ಇಲ್ಲಿ ಇದ್ದಾರೆ ಎಂದು ರೋಗಿ ಸಂಬಂಧಿ ಭುವನೇಶ್ವರಿ ತಿಳಿಸಿದ್ದಾರೆ.
ಈ ಜಿಲ್ಲಾಸ್ಪತ್ರೆಗೆ ಬೇಸಿಗೆ ಕಳೆದರೂ ನೀರಿನ ಬವಣೆ ತಪ್ಪುತ್ತಿಲ್ಲ. ನೀರು ಪೂರೈಕೆ ಮಾಡಬೇಕು ಅಂತ ಜಿಲ್ಲಾ ಸರ್ಜನ್ ಅವರು ನಗರಸಭೆಗೆ ಪತ್ರ ಬರೆದಿದ್ದಾರೆ. ಇನ್ನು ರೋಗಿಗಳು ಕುಡಿಯುವ ನೀರಿಗಾಗಿ ಹೊರಗಡೆ ಹೊಟೇಲ್ ನಲ್ಲಿ ನೀರು ತಂದು ಕುಡಿಯುತ್ತಿದ್ದಾರೆ.