ವಿದ್ಯುತ್‌ಗೆ ಸಮಸ್ಯೆ ಆಗಲ್ಲ, ದೇಶದಲ್ಲಿ ಕಲ್ಲಿದ್ದಲು ದಾಸ್ತಾನಿದೆ- ಪ್ರಹ್ಲಾದ್‌ ಜೋಷಿ ಸ್ಪಷ್ಟನೆ

Public TV
2 Min Read
Pralhad Joshi 1

ನವದೆಹಲಿ: ದೇಶದಲ್ಲಿ ಕಲ್ಲಿದ್ದಲು ಕೊರತೆ ಹೆಚ್ಚಾಗುತ್ತಿದ್ದು ಕರ್ನಾಟಕ ಸೇರಿದಂತೆ ದೆಹಲಿ, ಗುಜರಾತ್, ರಾಜಸ್ಥಾನ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ.

ರಾಜಸ್ಥಾನದಲ್ಲಿ ಲೋಡ್ ಶೆಡ್ಡಿಂಗ್ ಹೇರಲಾಗಿದೆ. ದೆಹಲಿ ಸಿಎಂ ಕೇಜ್ರಿವಾಲ್ ಪ್ರಧಾನಿ ಮೋದಿಗೆ ಪತ್ರ ಬರೆದು ದೆಹಲಿಯಲ್ಲಿ ವಿದ್ಯುತ್ ಕ್ಷಾಮ ತಲೆದೋರಬಹುದು ಎಂದಿದ್ದಾರೆ. ಮೂಲಗಳ ಪ್ರಕಾರ ದೇಶದಲ್ಲಿ ನಿತ್ಯ 18.5 ಲಕ್ಷ ಟನ್ ಕಲ್ಲಿದ್ದಲು ಅಗತ್ಯ ಇದ್ದು, 17.5 ಲಕ್ಷ ಟನ್ ಪೂರೈಕೆ ಆಗುತ್ತಿದೆ ಎನ್ನಲಾಗಿದೆ.

Electricity 1

ಕಲ್ಲಿದ್ದಲು ಖಾತೆಯನ್ನೂ ನಿಭಾಯಿಸುತ್ತಿರುವ ಪ್ರಹ್ಲಾದ್ ಜೋಷಿ ಉನ್ನತ ಸಭೆ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಟ್ವೀಟ್ ಮಾಡಿ, ದೇಶದಲ್ಲಿ ಸದ್ಯಕ್ಕೆ 43 ಮಿಲಿಯನ್ ಟನ್‍ನಷ್ಟು ಕಲ್ಲಿದ್ದಲು ದಾಸ್ತಾನಿದೆ. ಇದು 24 ದಿನಗಳಿಗೆ ಬೇಕಾಗುವಷ್ಟು ಅಗತ್ಯ ಕಲ್ಲಿದ್ದಲು ದಾಸ್ತಾನು ಇದೆ. ವಿದ್ಯುತ್ ಶಕ್ತಿ ಅಭಾವ ಆಗುವುದಿಲ್ಲ. ಉಷ್ಣ ವಿದ್ಯುತ್ ಸ್ಥಾವರಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಹ್ಲಾದ್ ಜೋಷಿ ಹೇಳಿದ್ದೇನು?
ಇಂದು ಕಲ್ಲಿದ್ದಲಿನ ಉತ್ಪಾದನೆ ಮತ್ತು ಪೂರೈಕೆ ಕುರಿತು ಪರಿಶೀಲನಾ ಸಭೆ ನಡೆಸಲಾಯಿತು. ದೇಶದಲ್ಲಿ ವಿದ್ಯುತ್ ಶಕ್ತಿಯ ಅಭಾವ ಇರುವುದಿಲ್ಲ. ಕೋಲ್‌ ಇಂಡಿಯಾದಲ್ಲಿ ಸುಮಾರು 43 ಟನ್‌ ಕಲ್ಲಿದ್ದಲಿನ ಸಂಗ್ರಹವಿದ್ದು, ಅದು ಸುಮಾರು 24 ದಿನಗಳ ಕಲ್ಲಿದ್ದಲಿನ ಬೇಡಿಕೆಯನ್ನು ಇಡೇರಿಸಬಲ್ಲದು.

coal mining 2

ಥರ್ಮಲ್ ಪಾವರ್ ಪ್ಲ್ಯಾಂಟಗಳಿಗೆ ಬೇಕಾಗುವಷ್ಟು ಕಲ್ಲಿದ್ದಲನ್ನು ಪ್ರತಿದಿನದಂತೆ ಸರಬರಾಜು ಮಾಡಲಾಗುತ್ತಿದೆ.ಮಳೆಗಾಲವು ಕಡಿಮೆ ಆದ ಹಿನ್ನಲೆಯಲ್ಲಿ ಕಲ್ಲಿದ್ದಲಿನ ಸರಬರಾಜು ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗಲಿದ್ದು ದೇಶದಲ್ಲಿ ಅಗತ್ಯ ಕಲ್ಲಿದ್ದಲಿನ ಸಂಗ್ರಹವಿದೆ.

ದೇಶೀಯ ಕಲ್ಲಿದ್ದಲು ಪೂರೈಕೆ ಹೆಚ್ಚಿದ್ದು ದೇಶದ ಕಲ್ಲಿದ್ದಲು ಆಮದು ಗಣನೀಯವಾಗಿ ಕಡಿಮೆ ಆಗಿರುವದು ಹೆಮ್ಮೆಯ ವಿಷಯ. ಆತ್ಮನಿರ್ಭರಭಾರತದ #AatmanirbharBharat ನಿರ್ಮಾಣದ ಹಾದಿಯಲ್ಲಿ ದೇಶೀಯ ಕಲ್ಲಿದ್ದಲಿನಿಂದ ವಿದ್ಯುತ್‌ ಶಕ್ತಿ ನಿರ್ಮಾಣ ಈ ಹಣಕಾಸಿನ ಅರ್ಧವರ್ಷದ ಅವಧಿಯಲ್ಲಿ ಸುಮಾರು 24% ಹೆಚ್ಚಿದ್ದು, ಕಲ್ಲಿದ್ದಲಿನ ಆಮದು 30% ಕಡಿಮೆಯಾಗಿದೆ. ಇದನ್ನೂ ಓದಿ: ಚೀನಾ ಕೈಯಿಂದ ನಾರ್ವೆಯ ಸೋಲಾರ್‌ ಕಂಪನಿ ಖರೀದಿಸಿದ ರಿಲಯನ್ಸ್‌ 

ಪ್ರತಿದಿನ ಕೋಲ್‌ ಇಂಡಿಯಾ ಮತ್ತು ಉಳಿದ ಕಲ್ಲಿದ್ದಲು ಉತ್ಪಾದನಾ ಘಟಕಗಳು ವಿದ್ಯುತ್ ಶಕ್ತಿ ಉತ್ಪಾದನೆಗೆ ಬೇಕಾಗುವಷ್ಟು ಕಲ್ಲಿದ್ದಲಿನ ಪೂರೈಕೆ ಮಾಡುತ್ತಿವೆ. ಕಲ್ಲಿದ್ದಲಿನ ಪೂರೈಕೆ ಅತ್ಯಂತ ಗರಿಷ್ಟ ಪ್ರಮಾಣದಲ್ಲಿದ್ದು ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿನ ಕಲ್ಲಿದ್ದಲಿನ ಸಂಗ್ರಹ ಬರುವ ದಿನಗಳಲ್ಲಿ ಹೆಚ್ಚಲಿದೆ.

ಈ ಹಣಕಾಸಿನ ಅರ್ಧವರ್ಷ ದಲ್ಲಿ ಕಲ್ಲಿದ್ದಲಿನ ಸಾರ್ವಜನಿಕ ವಲಯವಾದ ಕೋಲ್‌ ಇಂಡಿಯಾ ಅತ್ಯಂತ ಗರಿಷ್ಟ ಕಲ್ಲಿದ್ದಲಿನ ಉತ್ಪಾದನೆ ಹಾಗೂ ಪೂರೈಕೆ ಮಾಡಿದೆ. ಸುಮಾರು 263 ಎಂಟಿ ಕಲ್ಲಿದ್ದಲಿನ ಉತ್ಪಾದನೆ ಈ ವರ್ಷ ಆಗಿದ್ದು ಅದು ಕಳೆದ ವರ್ಷಕ್ಕಿಂತ 6.3% ನಷ್ಟು ಹೆಚ್ಚಿಗೆ ಆಗಿದೆ. ಸುಮಾರು 323 ಎಂಟಿ ಸರಬರಾಜು ಮಾಡಿದ್ದು ಕಳೆದ ವರ್ಷಕ್ಕಿಂತ 9% ಹೆಚ್ಚಿಗೆ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *