– ಯುಗಾದಿಗೆ ಡಲ್ ಆಯ್ತು ಕೆಎಸ್‍ಆರ್‍ಟಿಸಿ ಬಿಸಿನೆಸ್
ಬೆಂಗಳೂರು: ಹಬ್ಬಗಳು ಬಂತು ಅಂದ್ರೆ ಕೆಎಸ್‍ಆರ್‍ಟಿಸಿಯ ಎಲ್ಲ ಬಸ್‍ಗಳು ಪ್ರಯಾಣಿಕರಿಂದ ಭರ್ತಿಯಾಗುತ್ತಿದ್ದವು. ಹಬ್ಬದ ಸಮಯದಲ್ಲಿ ಹೆಚ್ಚು ಬಸ್‍ಗಳನ್ನು ರೋಡಿಗಿಳಿಸಿ ಬಂಪರ್ ಕಲೆಕ್ಷನ್ ಮಾಡ್ತಿದ್ದ ಕೆಎಸ್‍ಆರ್‍ಟಿಸಿಗೆ ಈ ಯುಗಾದಿ ಸ್ವಲ್ಪ ಕಹಿಯಾಗಿದೆ.
Advertisement
ಹಬ್ಬಗಳು, ಸಾಲು ಸಾಲು ಸರ್ಕಾರಿ ರಜೆಗಳು ಬಂದ್ರೆ ಕೋಟಿ ಜನಸಂಖ್ಯೆಯ ಸಿಲಿಕಾನ್ ಸಿಟಿ ಬಿಕೋ ಅನ್ನುತ್ತೆ. ಅದ್ರಲ್ಲೂ ಮಕ್ಕಳಿಗೆ ಬೇಸಿಗೆ ರಜೆ ಇರೋ ಸಮಯದಲ್ಲಿ ಬರುವ ಯುಗಾದಿ ಹಬ್ಬ ಅಂದ್ರೆ ಮಿಸ್ ಮಾಡೋದೇ ಇಲ್ಲ. ಜನ ತಮ್ಮ ತಮ್ಮ ಊರುಗಳಿಗೆ ಹಬ್ಬದ ಆಚರಣೆಗೆ ತೆರಳುತ್ತಾರೆ. ಈ ಕಾರಣಕ್ಕಾಗಿ ಕೆಎಸ್‍ಆರ್‍ಟಿಸಿ ಸೇರಿದಂತೆ ಎಲ್ಲ ಖಾಸಗಿ ಬಸ್‍ಗಳು ಪ್ರಯಾಣಿಕರಿಂದ ತುಂಬಿ ಹೋಗುತಿತ್ತು. ಈ ಸಮಯದಲ್ಲಿ ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಬಸ್‍ಗಳ ಕಾರ್ಯಾಚರಣೆ ಮೂಲಕ ಕೆಎಸ್‍ಆರ್‍ಟಿಸಿ ಭರ್ಜರಿ ಲಾಭ ಮಾಡಿಕೊಳ್ಳುತಿತ್ತು.
Advertisement
ಆದರೆ ಈ ಬಾರಿ ಇದಕ್ಕೆ ತದ್ವಿರುದ್ಧ ಎನ್ನುವಂತೆ ಯುಗಾದಿಗೆ ಕೆಎಸ್‍ಆರ್‍ಟಿಸಿ ಹೆಚ್ಚುವರಿ ಬಸ್‍ಗಳನ್ನು ರೋಡಿಗಿಳಿಸುತ್ತಿಲ್ಲ. ಮಾಮೂಲಿಯಾಗಿ ಓಡಾಡುವ ಬಸ್‍ಗಳೇ ಇನ್ನೂ ಸಂಪೂರ್ಣ ಬುಕ್ ಆಗದೇ ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‍ಗಳನ್ನು ಓಡಿಸದೇ ಇರುವ ನಿರ್ಧಾರಕ್ಕೆ ಕೆಎಸ್‍ಆರ್‍ಟಿಸಿ ಬಂದಿದೆ.
Advertisement
ಹೆಚ್ಚುವರಿ ಬಸ್ ಯಾಕಿಲ್ಲ?
ಈ ಬಾರಿಯ ಯುಗಾದಿ ವಾರದ ಮಧ್ಯೆ ಬಂದ ಕಾರಣ ಬೆಂಗಳೂರಿನಲ್ಲಿ ವಾಸವಾಗಿರುವ ಜನ ತಮ್ಮ ಊರುಗಳಿಗೆ ಹೋಗಲು ಹಿಂದೇಟು ಹಾಕಿದ್ದಾರೆ. ಅಲ್ಲದೇ ತಮ್ಮ ಮಕ್ಕಳನ್ನು ಆರ್‍ಟಿಇ ಅಡಿ ದಾಖಲಿಸಲು ಅರ್ಜಿ ಸಲ್ಲಿಸಲು ಮಾರ್ಚ್ 31 ಕಡೆಯ ದಿನಾಂಕವಾದ ಹಿನ್ನೆಲೆಯಲ್ಲಿ ಕೆಲವರು ಊರಿಗೆ ಹೋಗದೇ ಇರುವ ನಿರ್ಧಾರ ಮಾಡಿದ್ದಾರೆ.
Advertisement
ಎಲ್ಲದಕ್ಕಿಂತ ಪ್ರಮುಖವಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು 30ನೇ ತಾರೀಕಿನಿಂದ ಶುರುವಾಗುತ್ತಿದೆ. ಹೀಗಾಗಿ ಹಬ್ಬದ ಬಗ್ಗೆ ಗಮನ ಹರಿಸುವುದಕ್ಕಿಂತ ಮಕ್ಕಳ ಪರೀಕ್ಷೆ ಕಡೆಗೆ ಪೋಷಕರು ಹೆಚ್ಚು ಗಮನ ಹರಿಸಿದ್ದಾರೆ. ಅಷ್ಟೇ ಅಲ್ಲದೇ ಈ ವಾರದಿಂದ ಬೆಂಗಳೂರು ಟು ಹಾಸನ ಹೊಸ ರೈಲು ಸಂಚಾರ ಆರಂಭವಾಗಿದೆ. ಇನ್ನು ವಾರದಲ್ಲಿ ಮೂರು ದಿನ ಬೆಂಗಳೂರು ಟು ಶಿವಮೊಗ್ಗ ಹೊಸ ರೈಲು ಸಂಚರಿಸುವ ಕಾರಣ ಜನ ಮುಂಗಡ ಟಿಕೆಟ್ ಖರೀದಿ ಮಾಡಿಲ್ಲ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೌರಮಾನ ಯುಗಾದಿ(ವಿಷು) ಪ್ರಸಿದ್ಧ. ಏಪ್ರಿಲ್ ಎರಡನೇ ವಾರದಲ್ಲಿ ಈ ಯುಗಾದಿ ಬರುವ ಕಾರಣ ಈ ಪ್ರದೇಶಗಳ ಜನತೆ ಆ ವಾರ ಊರಿಗೆ ಹೋಗಲಿದ್ದಾರೆ.
ಒಟ್ಟಿನಲ್ಲಿ ಪ್ರತಿವರ್ಷ ಯುಗಾದಿ ಹಬ್ಬಕ್ಕೆ ಭರ್ಜರಿ ಕಲೆಕ್ಷನ್ ಮಾಡಿಕೊಳ್ಳುತ್ತಿದ್ದ ಕೆಎಸ್‍ಆರ್‍ಟಿಸಿಗೆ ಈ ಬಾರಿ ವರ್ಷದ ದೊಡ್ಡ ಹಬ್ಬ ಕಹಿಯಾಗಿದೆ.
ಇದನ್ನೂ ಓದಿ: KSRTC ಬಸ್‍ಗಳಲ್ಲಿ ಇನ್ಮುಂದೆ ನಾಯಿಗಳಿಗೂ ಟಿಕೆಟ್!