ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಎ1 ಆರೋಪಿ ಪವಿತ್ರಾಗೌಡ (Pavithra Gowda) ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪವನ್ನು ಜೈಲಧಿಕಾರಿಗಳು ತಳ್ಳಿ ಹಾಕಿ, ಯಾವುದೇ ವಿಶೇಷ ಸೌಲಭ್ಯ ನೀಡುತ್ತಿಲ್ಲ ಎಂದು ಸ್ಷಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಸಂಧ್ಯಾ ನಾಗರಾಜ್, ಜೈಲಿನಲ್ಲಿ ಅಧಿಕಾರಿಗಳು ಆಕೆಗೆ ಸಹಕಾರ ಕೊಡ್ತಿದ್ದಾರೆ. ಪ್ರತಿದಿನ ಬಾಕ್ಸ್‌ನಲ್ಲಿ ಊಟ ತಂದುಕೊಡ್ತಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಇದೀಗ ಜೈಲಧಿಕಾರಿಗಳು ಅಧಿಕೃತ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ, ಯಾವುದೇ ಶೇಷ ಸೌಲಭ್ಯ ನೀಡ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ – ಸಂಧ್ಯಾ ನಾಗರಾಜ್ ವಿರುದ್ಧ ದೂರು
ಈ ಹಿಂದೆ ಜೈಲಿನಲ್ಲಿ ಇದ್ದ ಸಂಧ್ಯಾ ನಾಗರಾಜ್ ಪವಿತ್ರಾಗೌಡ ಅವರನ್ನ ಭೇಟಿ ಮಾಡಿದ್ರಂತೆ. ಹೀಗಾಗಿ ಅವರಿಗೆ ಎಲ್ಲಾ ಸೌಲಭ್ಯ ಸಿಗ್ತಿದೆ ಅಂತ ಮಾಧ್ಯಮಗಳ ಮುಂದೆ ಹೇಳಿದ್ರು. ಈ ಆರೋಪವನ್ನು ಅಲ್ಲಗಳೆದಿರುವ ಪವಿತ್ರಾಗೌಡ ಜೈಲಿನಲ್ಲಿ ಇದ್ದುಕೊಂಡೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೊತೆಗೆ ರಶ್ಮಿ ಎಂಬ ಆರೋಪಿಯೂ ದೂರು ನೀಡಿದ್ದಾರೆ. ಸದ್ಯ ಜೈಲಿನಲ್ಲಿರುವ ಪವಿತ್ರಾಗೌಡ ತಮ್ಮ ಆತ್ಮಚರಿತ್ರೆ ಬರೆಯಲು ಆರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
