ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಇಡಿ ಅಧಿಕಾರಿಗಳು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದು, ಈ ಕುರಿತು ಶಾಸಕಿ ಪುತ್ರ ಮೃಣಾಲ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದ ಕೆರೆ ಅಭಿವೃದ್ಧಿ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ನನ್ನ ತಾಯಿ ಕಷ್ಟ ನೋಡಿ ನನಗೆ ತಡೆದುಕೊಳ್ಳಲು ಆಗುತ್ತಿಲ್ಲ. ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ, ಕಣ್ಣಲ್ಲಿ ನೀರು ಬರುತ್ತವೆ ಎಂದು ಕ್ಷೇತ್ರದ ಮತದಾರರ ಮುಂದೆ ಮೃಣಾಲ್ ಅಳಲು ತೊಡಿಕೊಂಡಿದ್ದಾರೆ.
Advertisement
ಯಾವುದೇ ಕಷ್ಟದಲ್ಲೂ ನನ್ನ ತಾಯಿ ಮುಖದಲ್ಲಿ ನಗು ಇರುತ್ತದೆ. ನನ್ನ ತಾಯಿಯ ಈ ಗುಣವನ್ನು ನಾವು ಕಲಿಯಬೇಕು. ನಿಮಗೆ ಕಾಲು ಮುಗಿದು ಕೇಳುತ್ತೇನೆ ನಿಮ್ಮ ಆಶೀರ್ವಾದ ನಮ್ಮ ತಾಯಿಯ ಮೇಲೆ ಇರಲಿ. ನಿಮ್ಮ ಆಶೀರ್ವಾದ ಇದ್ದಷ್ಟು ಒಳ್ಳೆ ಕೆಲಸ ಕ್ಷೇತ್ರದಲ್ಲಿ ಮಾಡುತ್ತೇವೆ. ನನ್ನ ತಾಯಿ ಕಾರಣಾಂತರಗಳಿಂದ ಈ ಕಾರ್ಯಕ್ರಮಕ್ಕೆ ಬಂದಿಲ್ಲ. ತಾಯಿ ಕಾರ್ಯಕ್ರಮಕ್ಕೆ ಬಾರಲು ಸಾಧ್ಯವಾಗಿಲ್ಲ. ಹೀಗಾಗಿ ನಾನು ಬಂದಿದ್ದೇನೆ ಎಂದು ತಿಳಿಸಿದರು.
Advertisement
Advertisement
ಶುಕ್ರವಾರವೂ ಸಹ ಇಡಿ ಅಧಿಕಾರಿಗಳ ಎದುರು 2ನೇ ದಿನ ವಿಚಾರಣೆಗೆ ಹಾಜರಾಗಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ 6 ಗಂಟೆಗಳ ವಿಚಾರಣೆ ಎದುರಿಸಿದ್ದರು. ಮಧ್ಯಾಹ್ನ 12 ಗಂಟೆ ವೇಳೆಗೆ ಇಡಿ ಕಚೇರಿಗೆ ತೆರಳಿದ್ದ ಅವರು, ನಗುಮುಖದೊಂದಿಗೆ ಕಂಡರು. ಆದರೆ ಗುರುವಾರ ವಿಚಾರಣೆಗೆ ತೆರಳಿದ್ದ ವೇಳೆ ಅವರ ಮುಖದಲ್ಲಿ ಆತಂಕ ಕಂಡು ಬಂದಿತ್ತು. ಗುರುವಾರ ವಿಚಾರಣೆ ಅಂತ್ಯವಾದ ಬಳಿಕ ಮತ್ತೆ ಶುಕ್ರವಾರ ವಿಚಾರಣೆಗೆ ಬರುವಂತೆ ಇಡಿ ಅಧಿಕಾರಿಗಳು ಸೂಚಿಸಿದ್ದರು.
Advertisement
ಶುಕ್ರವಾರ ವಿಚಾರಣೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಹಲವು ದಾಖಲೆಗಳೊಂದಿಗೆ ಹಾಜರಾಗಿದ್ದರು. ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ದಾಖಲೆ ಸಮೇತ ಮಾಹಿತಿ ಪಡೆದಿದ್ದಾರೆ. ವಿಚಾರಣೆಯ ವೇಳೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಡೆಸಿರುವ ಆರ್ಥಿಕ ವ್ಯವಹಾರಗಳ ಬಗ್ಗೆ ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ವಿವಿಧ ಕಂಪನಿಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹೂಡಿಕೆ ಹಾಗೂ ಹೂಡಿಕೆ ಮಾಡಿರುವ ಹಣದ ಮೂಲದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂಬ ಸಂಗತಿ ಮೂಲಗಳಿಂದ ಲಭಿಸಿದೆ.
ವಿಚಾರಣೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ನಾಳೆ ಮತ್ತೆ ವಿಚಾರಣೆಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿಲ್ಲ. ಮುಂದೆ ವಿಚಾರಣೆ ಬರುವ ಬಗ್ಗೆ ಅಧಿಕಾರಿಗಳು ಏನು ಹೇಳಿಲ್ಲ. ಇಂದಿನ ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು, ವಿಚಾರಣೆಗೆ ಸಹಕರಿಸಿದ್ದೇನೆ ಎಂದಿದ್ದರು.
ಡಿಕೆ ಶಿವಕುಮಾರ್ ನನ್ನ ರಾಜಕೀಯ ಗುರು ಎಂದು ಹೇಳಿದ ಲಕ್ಷ್ಮಿ ಹೆಬ್ಬಾಳ್ಕರ್, ನನ್ನನ್ನು ರಾಜಕೀಯವಾಗಿ ಡಿಕೆಶಿ ಬೆಳೆಸಿದ್ದಾರೆ. ಆದರೆ ನನ್ನ ಮತ್ತು ಡಿಕೆಶಿ ಅವರ ನಡುವೆ ಯಾವುದೇ ಹಣ ವರ್ಗಾವಣೆ ನಡೆದಿಲ್ಲ. ನಮ್ಮ ನಡುವೆ ವ್ಯವಹಾರಿಕ ಸಂಬಂಧ ಇಲ್ಲ. ಈ ಕುರಿತು ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ದಾಖಲೆ ನೀಡಿ ಉತ್ತರಿಸಿದ್ದೇನೆ. ಈ ಸಂದರ್ಭ ವಿಚಾರಣೆಗೆ ಸಂಬಂಧ ಇಷ್ಟು ಮಾತ್ರ ಹೇಳಬಲ್ಲೆ ಎಂದು ತಿಳಿಸಿದ್ದರು.