-ಸುಡುವ ಬಿಸಿಲಲ್ಲಿ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು
ಚಿತ್ರದುರ್ಗ: ಖಾಸಗಿ ಶಾಲೆಗಳ ಅಬ್ಬರದ ನಡುವೆ ಸರ್ಕಾರಿ ಶಾಲೆಗಳ ದಿನದಿಂದ ದಿನಕ್ಕೆ ತೆರೆಯ ಹಿಂದೆ ಸರಿಯುತ್ತಿವೆ. ಕಟ್ಟಡವಿದ್ದರೆ ಮಕ್ಕಳಿಲ್ಲ, ಮಕ್ಕಳಿದ್ದರೆ ಕಟ್ಟಡವಿಲ್ಲ ಎಂಬಂತಾಗಿದೆ ಸರ್ಕಾರಿ ಶಾಲೆಗಳ ಸ್ಥಿತಿ. ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಸಚಿವರ ಕ್ಷೇತ್ರದಲ್ಲಿಯ ಸರ್ಕಾರಿ ಶಾಲೆಯ ಮಕ್ಕಳು ಬಿಸಿಲಿನಲ್ಲಿಯೇ ಕುಳಿತು ಪಾಠ ಕೇಳುವ ಸ್ಥಿತಿ ಬಂದಿದೆ. ಮಕ್ಕಳು ಬಯಲಿನಲ್ಲಿ ಕುಳಿತು ಪಾಠ ಕೇಳುವ ದೃಶ್ಯವನ್ನು ನೋಡಿದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
ರಾಜ್ಯದ ಗಡಿಭಾಗದಲ್ಲಿರುವ ಈ ಸರ್ಕಾರಿ ಶಾಲೆ ಶಿಥಿಲಾವಸ್ಥೆಗೆ ತಲುಪಿ ಹಲವು ವರ್ಷಗಳೇ ಕಳೆದಿವೆ. ಮೇಲ್ಛಾವಣೆಯ ಸಿಮೆಂಟ್ ತುಂಡುಗಳು ವಿದ್ಯಾರ್ಥಿಗಳ ಮೇಲೆ ಬಿದ್ದು ಗಾಯಗೊಳಿಸುತ್ತಿವೆ. ಅಲ್ಲದೇ ಶಾಲೆಯ ಕೊಠಡಿಗಳ ಬಾಗಿಲು ಕಿಟಕಿಗಳು ಸಹ ಸಂಪೂರ್ಣ ಹಾಳಾಗಿದ್ದೂ, ಪಾಳುಬಿದ್ದ ಮನೆಯಂತಾಗಿವೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆಯಲ್ಲಿ ಪಾಠ ಕೇಳಲು ಹಿಂದೇಟು ಹಾಕುತ್ತಿದ್ದು, ಪ್ರಾಣಭಯದಿಂದ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳಿಸುತ್ತಿಲ್ಲ. ಇದನ್ನರಿತ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಯಲು ರಂಗಮಂದಿರದ ಆಶ್ರಯ ಪಡೆದಿದ್ದಾರೆ.
Advertisement
Advertisement
ನಾನು ಈ ಜಿಲ್ಲೆಗೆ ಬಂದು ಕೇವಲ ಎರಡು ತಿಂಗಳಾಗಿದೆ. ಕೋನಾಪುರ ಶಾಲೆ ಸ್ಥಿತಿ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಸಂಸದರ ನಿಧಿಯಿಂದ ತ್ವರಿತವಾಗಿ ಶಾಲಾ ಕಟ್ಟಡ ರಿಪೇರಿ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ. ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಚಿತ್ರದುರ್ಗ ಜಿಲ್ಲೆಯ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಹೇಳುತ್ತಾರೆ.
Advertisement
ಶಿಥಿಲಾವಸ್ಥೆಯಲ್ಲಿರುವ ಕೋನಾಪುರ ಶಾಲೆಯ ವಿದ್ಯಾರ್ಥಿಗಳಿಗೆ ಬಯಲು ರಂಗಮಂದಿರವೇ ಆಸರೆಯಾಗಿದೆ. ಈ ಬಗ್ಗೆ ಹಲವು ವರ್ಷಗಳಿಂದ ಪೋಷಕರು ಹಾಗು ವಿದ್ಯಾರ್ಥಿಗಳು ಹೋರಾಟ ಮಾಡುತ್ತಾ ಬಂದಿದ್ದಾರೆ. ಈವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅಥವಾ ಶಿಕ್ಷಣ ಇಲಾಖೆ ಅಧಿಕಾರಿಗಳಾಗಲಿ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ಬಯಲು ಪಾಠವೇ ವಿದ್ಯಾರ್ಥಿಗಳಿಗೆ ನಿರಂತರವಾಗಿದೆ. ಸುಡು ಬಿಸಿಲಲ್ಲಿ ಕುಳಿತು ಪಾಠ ಕೇಳುವ ಮಕ್ಕಳ ಸ್ಥಿತಿ ಕಂಡು ಪೋಷಕರ ಮನ ಕಲುಕುತ್ತಿದೆ. ಹೀಗಾಗಿ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದೂ, ತುರ್ತಾಗಿ ಶಾಲಾ ಕೊಠಡಿ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.