– 20 ರೂ. ಸರ್ಕಾರವೇ ಭರಿಸುತ್ತೆ
ಬೆಳಗಾವಿ: ರಾಜ್ಯದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಒಂದು ರೂಪಾಯಿಯೂ ಖರ್ಚು ಮಾಡುವುದು ಬೇಡ. ಅರ್ಜಿ (Application) ಸಲ್ಲಿಕೆ ವೇಳೆ ಇರುವ 20 ರೂ. ಹಣವನ್ನು ಸರ್ಕಾರವೇ ಭರಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.
ರಾಜ್ಯದ ಹಲವೆಡೆ ಗೃಹಲಕ್ಷ್ಮಿ ಯೋಜನೆಯ ನಕಲಿ ಅರ್ಜಿಗೆ 150 ರೂ. ಶುಲ್ಕ ವಸೂಲಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಹೆಬ್ಬಾಳ್ಕರ್, ಬಳ್ಳಾರಿಯಲ್ಲಿ ಈ ರೀತಿ ಪ್ರಕರಣ ನಡೆದಿರುವುದು ನನಗೂ ಬೆಳಗ್ಗೆಯೇ ಮಾಹಿತಿ ಬಂದಿದೆ. ನನ್ನ ಎಲ್ಲ ಇಲಾಖೆಯ ಸಿಬ್ಬಂದಿಗೂ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೇವಾ ಕೇಂದ್ರಗಳಿಗೆ 20 ರೂ. ಹಣ ನೀಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ಸೇವಾ ಸಿಂಧು, ಗ್ರಾಂ ಒನ್, ನಾಡಕಚೇರಿ, ಬಾಪುಜಿ ಸೇವಾ ಕೇಂದ್ರಗಳಿಗೆ ನಾವೇ ಹಣ ಭರಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ನನ್ನ ಇಲಾಖೆಯಿಂದಲೇ ಪ್ರತಿ ಅರ್ಜಿಗೆ 20 ರೂ. ಹಣವನ್ನು ಸೇವಾ ಕೇಂದ್ರಗಳಿಗೆ ನೀಡುತ್ತೇವೆ. ಮಧ್ಯವರ್ತಿಗಳ ಆಮಿಷಗಳಿಗೆ ರಾಜ್ಯದ ಮಹಿಳೆಯರು ಒಳಗಾಗಬಾರದು, ಕಿವಿಗೊಡಬಾರದು ಎಂದು ತಿಳಿಹೇಳಿದರು.
ಅರ್ಜಿ ಸಲ್ಲಿಕೆ ವೇಳೆ ಯಾರೂ ಒಂದು ರೂಪಾಯಿ ನೀಡಬಾರದು. ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಯಾವುದೇ ಸಮಯದ ಗಡುವು ಇಲ್ಲ. ಅರ್ಜಿ ಸ್ವೀಕಾರ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ಭ್ರಷ್ಟಾಚಾರ ಆಗಬಾರದು, ಸಾರ್ವಜನಿಕರ ಹಣ ಹೋಗಬಾರದು ಎಂಬುದೇ ನಮ್ಮ ಸರ್ಕಾರದ ಆಶಯವಾಗಿದೆ ಎಂದರು. ಇದನ್ನೂ ಓದಿ: ಗೃಹಲಕ್ಷ್ಮಿ ನೋಂದಣಿಗೆ ಮುನ್ನವೇ ಸುಲಿಗೆ- ಮನೆ ಮನೆಗೆ ತೆರಳಿ 150 ರೂ. ವಸೂಲಿ
ಅಂಗನವಾಡಿಗಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಲಿನ ವಿತರಣೆ ಸ್ಥಗಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ 4 ತಿಂಗಳಿಂದ ನನ್ನ ಇಲಾಖೆಯಿಂದ ಹಾಲು ಪೂರೈಕೆ ಆಗುತ್ತಿಲ್ಲ. ಬೆಲೆ ಏರಿಕೆ ಹೆಚ್ಚಾಗಿದೆ. ಹಿಂದಿನ ದರಕ್ಕೆ ಪೂರೈಕೆ ಅಸಾಧ್ಯ ಎಂದು ಕೆಎಂಎಫ್ ಹಾಲು ಪೂರೈಸುತ್ತಿಲ್ಲ. ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಬೇಕೆಂಬುದು ನಮ್ಮ ಉದ್ದೇಶವಾಗಿದೆ. ಹಾಲು ಕೊಡಲಾಗದಿದ್ದರೆ ಬೇರೆ ಪೌಷ್ಟಿಕ ಆಹಾರ ಕೊಡಲು ನಾವು ಚರ್ಚೆ ಮಾಡುತ್ತೇವೆ ಎಂದು ಹೆಬ್ಬಾಳ್ಕರ್ ಹೇಳಿದರು. ಇದನ್ನೂ ಓದಿ: ಹಿರಿಯ ವಕೀಲ ಮುಕುಲ್ ರೋಹಟಗಿ ಭೇಟಿಯಾದ ಡಿಸಿಎಂ
Web Stories