ನವದೆಹಲಿ: ನೋಟ್‍ಬ್ಯಾನ್ ನಿಂದ ಕಂಗೆಟ್ಟಿದ್ದ ಜನರಿಗೆ ಆರ್‍ಬಿಐ ದೊಡ್ಡ ರಿಲೀಫ್ ನೀಡಿದೆ. ಫೆಬ್ರವರಿ 20ರ ನಂತರ ಉಳಿತಾಯ ಖಾತೆಯಿಂದ ಹಣ ಡ್ರಾ ಮಾಡಲು ಇರುವ ಮಿತಿಯನ್ನು 50 ಸಾವಿರ ರೂ.ಗೆ ಏರಿಸಲಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಇಂದು ಘೋಷಿಸಿದೆ. ಇದರ ಜೊತೆ ಮಾರ್ಚ್ 13ರಿಂದ ಹಣ ವಿತ್‍ಡ್ರಾವಲ್‍ಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಹಿಂಪಡೆಯಲಾಗುತ್ತದೆ ಎಂದು ಆರ್‍ಬಿಐ ಹೇಳಿದೆ.
ಉಳಿತಾಯ ಖಾತೆಯಿಂದ ವಾರಕ್ಕೆ 24 ಸಾವಿರ ಇದ್ದ ವಿತ್‍ಡ್ರಾವಲ್ ಮಿತಿಯನ್ನು 50 ಸಾವಿರ ರೂ.ಗೆ ಹೆಚ್ಚಳ ಮಾಡಲಾಗುತ್ತದೆ. ಜನವರಿ 27ರ ವೇಳೆಗೆ 9.92 ಲಕ್ಷ ಕೋಟಿ ರೂ. ಮೌಲ್ಯದ ಕರೆನ್ಸಿ ಚಾಲ್ತಿಯಲ್ಲಿದೆ. ಹೊಸ 500 ಹಾಗೂ 2000 ರೂ. ನೋಟನ್ನು ನಕಲಿ ಮಾಡಲು ಸಾಧ್ಯವಿಲ್ಲ. ನಕಲಿ ಎಂದು ಪತ್ತೆಯಾಗಿರುವ ನೋಟ್‍ಗಳು ಫೋಟೋ ಕಾಪಿಗಳಷ್ಟೆ, ಮುದ್ರಿತ ನೋಟ್‍ಗಳಲ್ಲ ಎಂದು ಆರ್‍ಬಿಐ ಹೇಳಿದೆ.
Advertisement
ಈ ಹಿಂದೆ ಎಟಿಎಂನಿಂದ ದಿನ ಒಂದಕ್ಕೆ ಗರಿಷ್ಠ 10 ಸಾವಿರ ರೂ. ಹಣವನ್ನು ಡ್ರಾ ಮಾಡಲು ಆರ್‍ಬಿಐ ಅನುಮತಿ ನೀಡಿತ್ತು. ಆದರೆ ಫೆಬ್ರವರಿ 1ರಿಂದ ಚಾಲ್ತಿ ಖಾತೆ/ ಕ್ಯಾಶ್ ಕ್ರೆಡಿಟ್ ಖಾತೆ/ ಓವರ್ ಡ್ರಾಫ್ಟ್ ಖಾತೆ ಹೊಂದಿದವರಿಗೆ ಹಣ ತೆಗೆಯಲು ಇದ್ದ ಮಿತಿಯನ್ನು ಆರ್‍ಬಿಐ ಹಿಂದಕ್ಕೆ ಪಡೆದಿತ್ತು. ಆದ್ರೆ ಉಳಿತಾಯ ಖಾತೆಯಿಂದ ವಾರಕ್ಕೆ 24 ಸಾವಿರ ರೂ. ವರೆಗೆ ವಿತ್‍ಡ್ರಾವಲ್ ಮಿತಿಯನ್ನು ಹಾಗೇ ಮುಂದುವರೆಸಲಾಗಿತ್ತು.
Advertisement