ವರದಕ್ಷಿಣೆ ಪ್ರಕರಣಗಳಲ್ಲಿ ಹೆಂಡ್ತಿ ದೂರು ಕೊಟ್ಟ ಮಾತ್ರಕ್ಕೆ ಬಂಧಿಸುವಂತಿಲ್ಲ: ಸುಪ್ರೀಂ ಕೋರ್ಟ್

Public TV
1 Min Read
dowry case

ನವದೆಹಲಿ: ವರದಕ್ಷಿಣೆ ಸಂಬಂಧಿತ ಪ್ರಕರಣಗಳಲ್ಲಿ ಇನ್ಮುಂದೆ ಯಾರನ್ನೂ ಶೀಘ್ರವೇ ಬಂಧಿಸಲು ಸಾಧ್ಯವಿಲ್ಲ. ಯಾಕಂದ್ರೆ ವರದಕ್ಷಿಣೆ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ನಡೆಸದೆ ಯಾರನ್ನೂ ಬಂಧಿಸುವಂತಿಲ್ಲ ಅಂತ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

1983ರಲ್ಲಿ ರಚನೆಯಾದ ವರದಕ್ಷಿಣೆ ವಿರೋಧಿ ಕಾನೂನನ್ನು ಮಹಿಳೆಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಸಾಕಷ್ಟು ವರ್ಷಗಳಿಂದ ದೂರುಗಳ ದಾಖಲಾಗಿರೋ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ಈ ಆದೇಶ ಹೊರಡಿಸಿದೆ.

ಮೂರು ವರ್ಷಗಳ ಹಿಂದೆ ಅಂದ್ರೆ 2014ರ ಜುಲೈ ನಲ್ಲಿ ನ್ಯಾಯಾಲಯವು 40 ಅಂಶಗಳ ಪಟ್ಟಿ ನೀಡಿ, ಪೊಲೀಸರು ಯಾವುದೇ ಬಂಧನ ಮಾಡುವ ಮುನ್ನ ಇದನ್ನ ನೋಡಬೇಕು ಎಂದು ಹೇಳಿತ್ತು. ಅಲ್ಲದೆ ವರದಕ್ಷಿಣೆ ವಿರೋಧಿ ಕಾನೂನಿನ ದುರ್ಬಳಕೆ ತಪ್ಪಿಸಲು ಅದನ್ನು ತಿದ್ದುಪಡಿ ಮಾಡುವಂತೆ ಕಾನೂನು ಸಚಿವಾಲಕ್ಕೆ ಸಲಹೆ ಕೂಡ ನೀಡಿತ್ತು.

ಪತಿ ಅಥವಾ ಆತನ ಕುಟುಂಬದಿಂದ ಮಹಿಳೆಯ ಮೇಲೆ ಹಿಂಸೆ ತಡೆಯುವ ಸಲುವಾಗಿ ಈ ಕಾನೂನನ್ನು ಜಾರಿಗೆ ತರಲಾಯ್ತು. ಆದ್ರೆ ಕಾನೂನಿನ ದುರ್ಬಳಕೆ ಆಗ್ತಿರೋದ್ರಿಂದ ದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲೂ ಕುಟುಂಬ ಕಲ್ಯಾಣ ಸಮಿತಿಗಳನ್ನ ಸ್ಥಾಪಿಸಬೇಕು ಎಂದು ನ್ಯಾ. ಎ.ಕೆ ಗೋಯಲ್ ಹಾಗೂ ಯು.ಯು ಲಲಿತ್ ನೇತೃತ್ವದ ಪೀಠ ಹೇಳಿದೆ.

ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ದಾಖಲಿಸಲಾದ ಯಾವುದೇ ವರದಕ್ಷಿಣೆ ಕಿರುಕುಳ ಪ್ರಕರಣವನ್ನ ಮೊದಲು ಸಮಿತಿಗೆ ನೀಡಬೇಕು. ಸಮಿತಿಯು ಅದನ್ನು ಪರಿಶೀಲಿಸಬೇಕು ಎಂದು ಕೋರ್ಟ್ ಹೇಳಿದೆ. ಅಲ್ಲದೆ ಸಮಿತಿಯು ಪಾಲಿಸಬೇಕಾದ ಕಾರ್ಯವಿಧಾನಗಳನ್ನೂ ಕೂಡ ಕೋರ್ಟ್ ತಿಳಿಸಿದೆ. ಮೊದಲು ದಂಪತಿ ಹಾಗೂ ಅವರ ಕುಟುಂಬದವರನ್ನ ಕರೆಸಿ ವಿಷಯವನ್ನ ಚರ್ಚಿಸಬೇಕು. ನಂತರ ಸ್ಥಳೀಯ ಮ್ಯಾಜಿಸ್ಟ್ರೇಟ್‍ಗೆ ಸಮಿತಿ ವರದಿ ಸಲ್ಲಿಸಬೇಕು. ಪತಿ ಕಿರುಕುಳ ನೀಡಿದ ಬಗ್ಗೆ ಸಮಿತಿ ಉಲ್ಲೇಖಿಸಿದಲ್ಲಿ ಮಾತ್ರ ಬಂಧನ ಮಾಡಬೇಕು ಎಂದು ಕೋರ್ಟ್ ಹೇಳಿದೆ.

ರಾಜೇಶ್ ಶರ್ಮಾ ಎಂಬವರು ಅಲಾಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *