ಮಡಿಕೇರಿ: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿದ್ದ ಕೊಡಗು ಪುನರ್ ನಿರ್ಮಾಣದ ಕನಸು ನನಸಾಗುವ ಲಕ್ಷಣ ಕಾಣುತ್ತಿಲ್ಲ. ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿರುವ ಕುಟುಂಬಗಳಿಗೆ 5 ತಿಂಗಳು ಕಳೆದರೂ ಒಂದೇ ಒಂದು ಸೂರಿನ ನೆರಳು ಕೂಡ ಸಿಕ್ಕಿಲ್ಲ. ನಿವೇಶನಕ್ಕೆ ಎಂದು ಗುರುತಿಸಿರುವ ಭೂಮಿಯಲ್ಲಿ ಅಡಿಗಲ್ಲಿಟ್ಟು ಆಸೆ ಹುಟ್ಟಿಸಿದ್ದೇ ಬಂತು, ಮನೆಗಳು ಮಾತ್ರ ನಿರ್ಮಾಣವಾಗುತ್ತಿಲ್ಲ. ಅಡಿಗಲ್ಲಿಟ್ಟು ಒಂದು ತಿಂಗಳೊಳಗೆ ಮನೆ ನಿರ್ಮಾಣವಾಗುತ್ತೆ ಎನ್ನುವ ಸಿಎಂ ಭರವಸೆ ಹುಸಿಯಾಗಿರುವುದು ನಿರಾಶ್ರಿತರ ಆತಂಕಕ್ಕೆ ಕಾರಣವಾಗಿದೆ.
ರಣಭೀಕರ ಮಳೆ, ಭೀಕರ ಭೂಕುಸಿತಕ್ಕೆ ಸಿಲುಕಿ ಮನೆಗಳು ನೆಲ ಸಮವಾಗಿ, ಜನರು ಅತಂತ್ರರಾಗಿ ಬರೋಬ್ಬರಿ 5 ತಿಂಗಳು ಕಳೆದಿದೆ. ಸೂರು ಕಲ್ಪಿಸುವುದ್ದಕ್ಕೆ ಜಿಲ್ಲೆಯ 5 ಕಡೆಗಳಲ್ಲಿ ನೂರಾರು ಏಕರೆ ಭೂಮಿ ಗುರುತಿಸಿ 3 ತಿಂಗಳಾಗಿದೆ. ಮನೆ ಮಠ ಕಳೆದುಕೊಂಡವರನ್ನು ನಿರಾಶ್ರಿತ ಕೇಂದ್ರದಿಂದ ಹೊರತಳ್ಳಿ 1 ತಿಂಗಳು ಉರುಳಿದೆ. ಇನ್ನೂ ಗುರುತಿಸಿದ ಭೂಮಿಯಲ್ಲಿ ಮನೆ ನಿರ್ಮಾಣಕ್ಕೆ ಅಡಿಗಲ್ಲಿಟ್ಟು ಒಂದು ತಿಂಗಳೊಳಗೆ ಮನೆ ನಿರ್ಮಾಣವಾಗುತ್ತೆ ಎಂದು ಸಿಎಂ ಹೇಳಿ 1 ತಿಂಗಳ ಮೇಲೆ 10 ದಿನವಾಗಿದೆ. ಆದರೂ ಕೂಡ ಒಂದೇ ಒಂದು ಮನೆ ನಿರ್ಮಾಣವಾಗಿಲ್ಲ. ಅಲೆಮಾರಿಗಳಾಗಿ ಸೂರಿನ ಕನಸು ಕಾಣುತ್ತಿರುವವರ ಕಣ್ಣೀರು ಒರೆಸೋರು ಕಣ್ಮರೆಯಾಗಿ ಎಷ್ಟೋ ದಿನಗಳಾಗಿದೆ. ಜನಪ್ರತಿನಿಧಿಗಳ ಪೊಳ್ಳು ಭರವಸೆ ಹಾಗೂ ಆಡಳಿತದ ಆಮೆಗತಿಗೆ ಹಿಡಿದ ಕೈಗನ್ನಡಿಯಾಗಿದೆ. ಕೊಡಗು ಪುನರ್ ನಿರ್ಮಾಣದ ಕಾರ್ಯವೈಖರಿ. ಆಶ್ಚರ್ಯ ಆದರೂ ಇದು ಸತ್ಯ. ಸರ್ಕಾರದ ಈ ನಡೆ ಸೂರು ಕಳೆದುಕೊಂಡವರ ಆತಂಕಕ್ಕೆ ಕಾರಣವಾಗಿದೆ.
ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಸುಮಾರು 480 ಕುಟುಂಬಗಳು ಮನೆ ಕಳೆದುಕೊಂಡಿವೆ. ಅವರಿಗೆ ಮನೆ ನಿರ್ಮಿಸಿಕೊಡುವುದ್ದಕ್ಕೆ ಎಂದು ಜಿಲ್ಲೆಯ ಕರ್ಣಂಗೇರಿ, ಮದೆ, ಸಂಪಾಜೆ, ಕುಶಾಲನಗರ ಹಾಗೂ ಜಂಬೂರುಗಳಲ್ಲಿ ಸುಮಾರು 95.06 ಏಕರೆ ಭೂಮಿ ಗುರುತಿಸಿದೆ. ರಾಜೀವ್ ಗಾಂಧಿ ವಸತಿ ನಿಗಮ ಮನೆ ನಿರ್ಮಾಣದ ಹೊಣೆ ಹೊತ್ತಿದೆ. ಇದರ ನಡುವೆ ಡಬಲ್ ಬೆಡ್ ರೂಂ ಮನೆ ನಿರ್ಮಾಣದ ತೀರ್ಮಾನ ಅಂತಿಮವಾಗಿ ಡಿಸಂಬರ್ 7ರಂದು ಸಿಎಂ ಕುಮಾರಸ್ವಾಮಿ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದರು. ಅಲ್ಲದೇ ಅಂದು ಒಂದು ತಿಂಗಳೊಳಗೆ ಮನೆ ನಿರ್ಮಾಣವಾಗುತ್ತೆ ಎಂದು ಭರವಸೆಯನ್ನು ನೀಡಿದ್ದರು. ಆದರೆ ಇದುವರೆಗೂ ಒಂದೇ ಒಂದು ಮನೆ ಕೂಡ ನಿರ್ಮಾಣವಾಗಿಲ್ಲ. ಮನೆ ನಿರ್ಮಾಣ ಇರಲಿ ಒಂದು ಕಡೆ ಬಿಟ್ಟರೆ ಬೇರೆಲ್ಲೂ ಕೂಡ ಮನೆಯ ಫೌಂಡೇಶನ್ ಕೆಲಸ ಕೂಡ ಆಗಿಲ್ಲ. ಹೀಗಾದರೆ ಮನೆ ಯಾವಾಗ ನಿರ್ಮಾಣವಾಗುತ್ತೆ, ನಮಗ್ಯಾವಾಗ ಸೂರು ಸಿಗುತ್ತೆ? ಸಿಗುತ್ತಾ ಇಲ್ವಾ ಎನ್ನುವ ಆತಂಕದಲ್ಲೇ ನಿರಾಶ್ರಿತರು ದಿನದೂಡುವಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv