ಬಹುಕೋಟಿ ವೆಚ್ಚದ BRTS ಬಸ್‌ಗಳಲ್ಲಿ ಇಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ

Public TV
2 Min Read
Chigari Bus

– ಅಧಿಕಾರಿಗಳು ಸರ್ಕಾರದ ಅನುಮತಿ ಕೇಳಿದರೂ ಬಾರದ ಪ್ರತಿಕ್ರಿಯೆ

ಹುಬ್ಬಳ್ಳಿ: ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ ಶೀಘ್ರವಾಗಿ ಸಂಪರ್ಕ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿ ಐಷಾರಾಮಿ ಎಸಿ ಬಸ್ ಸಂಚಾರಕ್ಕೆ ಚಿಗರಿ (Chigari) ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ನಿತ್ಯ ನೂರಾರು ಚಿಗರಿ ಬಸ್‌ಗಳು ಅವಳಿ ನಗರಗಳ ಮಧ್ಯೆ ಓಡಾಡುತ್ತವೆ. ಈ ಚಿಗರಿ ಬಸ್‌ಗಳು ಹವಾನಿಯಂತ್ರಿತವಾಗಿದ್ದು, ಮಹಿಳೆಯರ ಉಚಿತ ಬಸ್ (Bus) ಪ್ರಯಾಣ ಯೋಜನೆಗೆ ಈಗ ಇದೆ ಮುಳುವಾಗಿ ಪರಿಣಿಮಿಸಿದೆ. ಒಂದು ಕಡೆ ಜನರ ಒತ್ತಾಯ ಮತ್ತೊಂದು ಕಡೆ ಸರ್ಕಾರದ ಜಾಣ ನಡೆಯಿಂದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

Chigari Bus 2

ಕಾಂಗ್ರೆಸ್ (Congress) ಸರ್ಕಾರ 5 ಗ್ಯಾರಂಟಿ ಹೆಸರು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ ಈಗ 5 ಯೋಜನೆ ಜಾರಿಗೆ ದಿನಕ್ಕೆ ಒಂದೊಂದು ಷರತ್ತು ಹಾಕುತ್ತಿರುವುದು ಜನರ ಅಸಮಾಧಾನಕ್ಕೆ ಸಹ ಕಾರಣವಾಗಿದೆ. ಈ ತಿಂಗಳ 11 ರಿಂದ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಬಹುದಾಗಿದ್ದು, ಇದು ರಾಜ್ಯದ ಮಹಿಳೆಯರಿಗೆ ಕೊಂಚ ಸಮಾಧಾನಕರ ವಿಷಯ. ಆದರೆ ಈ ಖುಷಿ ಹುಬ್ಬಳ್ಳಿ ಧಾರವಾಡದ ಮಹಿಳೆಯರಿಗೆ ಕೊಟ್ಟು ಕಸಿದಂತಾಗಿದೆ. ಬಹು ಕೋಟಿ ವೆಚ್ಚದ ಮತ್ತು ಜನ ಬಹಳಷ್ಟು ನೆಚ್ಚಿಕೊಂಡಿರುವ ಬಿಆರ್‌ಟಿಎಸ್ (BRTS) ಸಾರಿಗೆಯಲ್ಲಿ ಉಚಿತ ಪ್ರಯಾಣ ಇನ್ನೂ ಕಗ್ಗಂಟಾಗಿದೆ.

Chigari Bus 1

ಸರ್ಕಾರದ ಆದೇಶದಲ್ಲಿ ಹವಾನಿಯಂತ್ರಿತ, ರಾಜಹಂಸ ಸೇರಿ ಕೆಲ ಬಸ್‌ಗಳಲ್ಲಿ ಉಚಿತ ಪ್ರಯಾಣ ಇಲ್ಲ. ಆದರೆ ಚಿಗರಿ ಬಸ್ ವ್ಯವಸ್ಥೆ ರಾಜ್ಯದಲ್ಲಿ ಮೊದಲ ವಿಭಿನ್ನ ಸಿಟಿ ಬಸ್ ಸಂಚಾರವಾಗಿದೆ. ನಿತ್ಯ ಸಾವಿರಾರು ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇಂತಹ ಸಂಪರ್ಕ ಯೋಜನೆ ಉಚಿತ ಬಸ್ ಪ್ರಯಾಣ ಯೋಜನೆ ವ್ಯಾಪ್ತಿಗೆ ಬಾರದೆ ಇರುವುದು ಜಿಲ್ಲೆಯ ಮಹಿಳೆಯರ ಅಸಮಾಧಾನಕ್ಕೆ ಕಾರಣವಾಗಿದೆ. ನಿತ್ಯ ಸುಮಾರು 96 ಚಿಗರಿ ಬಸ್‌ಗಳಲ್ಲಿ 80 ಸಾವಿರ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಹೀಗಾಗಿ ಚಿಗರಿ ಬಸ್‌ಗಳಲ್ಲಿ ಮಹಿಳೆಯರು ಫ್ರೀ ಸಂಚಾರಕ್ಕೆ ಅವಕಾಶ ಕೊಡಬೇಕು ಎನ್ನುವುದು ಮಹಿಳೆಯರ ವಾದ. ಇದನ್ನೂ ಓದಿ: 500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

ಇನ್ನೂ ಬಿಆರ್‌ಟಿಎಸ್ ವ್ಯಾಪ್ತಿಯ ಚಿಗರಿ ಬಸ್ ಸೇವೆಗೆ ಮೊದಲಿಂದಲೂ ಒಂದಲ್ಲಾ ಒಂದು ಸಮಸ್ಯೆಗಳಿದ್ದು, ವ್ಯವಸ್ಥೆ ಈಗ ನಷ್ಟದಲ್ಲಿ ನಡೆಯುತ್ತಿದೆ. ಮಾಹಿತಿ ಪ್ರಕಾರ ತಿಂಗಳಿಗೆ 2 ಕೋಟಿ ರೂ. ಯಷ್ಟು ನಷ್ಟದ ಹೊರೆ ಬಿಆಆರ್‌ಟಿಎಸ್ ಇಲಾಖೆ ಮೇಲೆ ಬೀಳುತ್ತಿದೆ. ಇಂತಹ ಸಂದರ್ಭದಲ್ಲಿ ಶಕ್ತಿ ಯೋಜನೆಯ ವ್ಯಾಪ್ತಿಗೆ ಚಿಗರಿ ಬಸ್ ಒಳಪಡಿಸಿದರೆ ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂಬುವುದು ಅಧಿಕಾರಿಗಳ ವಾದವಾಗಿದೆ. ಹೀಗಿದ್ದರೂ ಸಹ ಜನರ ಒತ್ತಾಯದ ಮೇರೆಗೆ ಬಿಆರ್‌ಟಿಎಸ್ ಎಂಡಿ ಭರತ್ ಶಕ್ತಿ ಯೋಜನೆಯಲ್ಲಿ ಚಿಗರಿ ಬಸ್ ತರಲು ಅನುಮತಿ ನೀಡಿ ಎಂದು ಸರ್ಕಾರಕ್ಕೆ ಕೋರಿಕೊಂಡಿದ್ದಾರೆ. ಆದರೆ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಅಧಿಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದನ್ನೂ ಓದಿ: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ ಸ್ಪಷ್ಟನೆ

Share This Article