ಚಾಮರಾಜನಗರ: ಹೆಣ್ಣುಮಕ್ಕಳು ಪ್ರವೇಶಿಸಿದರೆ ಕಲ್ಲಾಗಿಬಿಡುತ್ತಾರೆ ಎಂಬ ನಂಬಿಕೆ ಇರುವುದರಿಂದ ಜಿಲ್ಲೆಯ ಪ್ರಸಿದ್ಧ ದೇವಾಲಯದಲ್ಲಿ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಚಾಮರಾಜನಗರ ಮತ್ತು ತಮಿಳುನಾಡಿನ ಗಡಿಭಾಗದಲ್ಲಿರುವ ಕೊಂಗಳ್ಳಿ ಬೆಟ್ಟದಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನವಿದೆ. ಈ ದೇಗುಲಕ್ಕೆ ಯಾವುದೇ ವಯಸ್ಸಿನ ಹೆಣ್ಣು ಮಕ್ಕಳು ಪ್ರವೇಶಿಸುವಂತಿಲ್ಲ. ಶಬರಿಮಲೆಯಲ್ಲಿ 10 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಹಾಗೂ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರವೇಶವಿದೆ. ಆದರೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಎಲ್ಲ ವಯೋಮಾನದ ಹೆಣ್ಣು ಮಕ್ಕಳು/ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
Advertisement
Advertisement
ಮಹಿಳೆಯರಿಗೆ ಪ್ರವೇಶವಿಲ್ಲ ಯಾಕೆ?
ಮಹದೇಶ್ವರರ ಸಮಕಾಲೀನರಾದ ಮಲ್ಲಿಕಾರ್ಜುನಸ್ವಾಮಿ ಅವರು ಶ್ರೀಶೈಲದಿಂದ ಬಂದು ಕೊಂಗಳ್ಳಿ ಬೆಟ್ಟದಲ್ಲಿ ತಪಸ್ಸು ಮಾಡಿ ಇಲ್ಲೇ ಐಕ್ಯವಾದರು ಎಂಬ ನಂಬಿಕೆಯಿದೆ. ವಿಶೇಷವೆಂದರೆ ಇಲ್ಲಿ ತಪಸ್ಸು ಮಾಡುತ್ತಿದ್ದಾಗ ಮಹಿಳೆಯರು ಬಂದರೆ ತಮ್ಮ ತಪಸ್ಸಿಗೆ ಭಂಗ ಬರುತ್ತದೆ. ಹಾಗಾಗಿ ಹೆಣ್ಣುಮಕ್ಕಳು ಈ ಸ್ಥಳಕ್ಕೆ ಬರುವುದು ಬೇಡ ಎಂದು ಮಲ್ಲಿಕಾರ್ಜುನ ಸ್ವಾಮಿ ಸಂಕಲ್ಪ ಮಾಡಿಕೊಂಡಿದ್ದರಂತೆ. ಮಲ್ಲಿಕಾರ್ಜುನಸ್ವಾಮಿಯವರ ಮಾತನ್ನೂ ಮೀರಿ ಬಂದ ಮಹಿಳೆಯೊಬ್ಬಳು ಬೆಟ್ಟವನ್ನು ಏರಿದ್ದಾಳೆ. ಇದು ಮಲ್ಲಿಕಾರ್ಜುನ ಸ್ವಾಮಿ ಅವರ ಕೆಂಗಣ್ಣಿಗೆ ಗುರಿಯಾಗಿ ಆಕೆ ಕಲ್ಲಾಗಿ ಹೋಗಿದ್ದಾಳೆ ಎನ್ನುವ ಕಥೆಯಿದೆ. ಹೀಗಾಗಿ ಹಿಂದಿನ ಕಾಲದಿಂದಲೂ ಮಹಿಳೆಯರು ಇತ್ತ ಕಡೆ ತಲೆಯೇ ಹಾಕುವುದಿಲ್ಲ ಎಂದು ದೇವಾಲಯದ ಪ್ರಧಾನ ಅರ್ಚಕ ಸದಾಶಿವ ಸ್ವಾಮೀಜಿ ಹೇಳಿದ್ದಾರೆ.
Advertisement
Advertisement
ಇಷ್ಟೆಲ್ಲದರ ನಡುವೆ ಈ ದೇಗುಲದಲ್ಲಿ ಒಂದು ವಿಶೇಷವಿದೆ. ಇಲ್ಲಿಗೆ ಮಹಿಳೆಯರು ಪ್ರವೇಶ ಮಾಡುವುದಿಲ್ಲವಾದರೂ ಮಲ್ಲಿಕಾರ್ಜುನಸ್ವಾಮಿಗೆ ಹರಕೆ ಹೊತ್ತು ಇಲ್ಲಿನ ಪ್ರಸಾದ ಸ್ವೀಕರಿಸಿದರೆ ಮಕ್ಕಳಾಗುತ್ತವೆ. ಅಲ್ಲದೇ ಮಲ್ಲಿಕಾರ್ಜುನಸ್ವಾಮಿಗೆ ಹರಕೆ ಹೊತ್ತರೆ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಇಷ್ಟಾರ್ಥ ಈಡೇರಿದ ಭಕ್ತರು ಇಲ್ಲಿಗೆ ಆಗಮಿಸಿ ಮಲ್ಲಿಕಾರ್ಜುನಸ್ವಾಮಿಗೆ ರುದ್ರಾಭೀಷೇಕ, ಹುಲಿವಾಹನ ಸೇವೆ ಮಾಡಿ ತಮ್ಮ ಹರಕೆ ತೀರಿಸುತ್ತಾರೆ.
ಗಡಿಭಾಗದಲ್ಲಿರುವ ಕೊಂಗಳ್ಳಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರೇ ಆಗಮಿಸುತ್ತಾರೆ. ಕಾರ್ತಿಕ ಮಾಸ, ಧನುರ್ಮಾಸ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಇಲ್ಲಿಗೆ ನೆರೆಯ ಮೈಸೂರು, ಮಂಡ್ಯ, ಬೆಂಗಳೂರು ಮತ್ತಿತರ ಜಿಲ್ಲೆಗಳಿಂದ ಸಹಸ್ರಾರು ಮಂದಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಹೋಗುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv