ಉಡುಪಿ: ವರ್ಷಪೂರ್ತಿ ಭಕ್ತರಿಂದ ತುಂಬಿಕೊಳ್ಳುತ್ತಿದ್ದ ಉಡುಪಿ ಶ್ರೀಕೃಷ್ಣ ಮಠ ಇದೀಗ ಬಿಕೋ ಎನ್ನುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಠಕ್ಕೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ರಾಜ್ಯಾದ್ಯಂತ ಕೊರೊನಾ ವೈರಸ್ ಭೀತಿ ಇದ್ದು ಪ್ರವಾಸಿಗರು ಅದರಲ್ಲೂ ಧಾರ್ಮಿಕ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.
ಮಠ ಮಂದಿರಗಳಿಂದ, ದೇವಸ್ಥಾನಗಳಿಂದ ಭಕ್ತರು ದೂರ ಇದ್ದಾರೆ. ಮಕ್ಕಳಿಗೆ ಪರೀಕ್ಷೆ ಕೂಡ ಇರುವುದರಿಂದ ಮಠದ ಆಸುಪಾಸಲ್ಲಿ ಜನರೇ ಇಲ್ಲ. ಶ್ರೀ ಕೃಷ್ಣನ ಮಹಾಪೂಜೆಯ ಸಂದರ್ಭ ಸರತಿಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ಕಾಯುತ್ತಾರೆ. ಆದರೆ ಇಂದು ಬೆರಳೆಣಿಕೆಯ ಭಕ್ತರು ಮಾತ್ರ ಮಠದಲ್ಲಿ ಕಂಡು ಬಂದರು. ಕೃಷ್ಣ ಮಠದ ಪಾರ್ಕಿಂಗ್ ಏರಿಯಾ ವಾಹನಗಳೇ ಇಲ್ಲದೆ ಬಿಕೋ ಎನ್ನುತ್ತಿದೆ.
Advertisement
Advertisement
ಕೃಷ್ಣಮಠದ ಭಕ್ತ ಶ್ರೀಪಾದ ಮಾತನಾಡಿ, ಶ್ರೀಕೃಷ್ಣ ಮಠಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ಬರುವ ಭಕ್ತರ ಸಂಖ್ಯೆ ಬಹಳ ಕಡಿಮೆಯಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಎಕ್ಸಾಂ ನಡೆಯುತ್ತಿರುವುದರಿಂದ ಭಕ್ತರ ಸಂಖ್ಯೆ ಕಡಿಮೆಯಾಗಿರುವ ಸಾಧ್ಯತೆಯಿದೆ. ಆಮೇಲೆ ಪೇಪರ್, ಟಿವಿಯಲ್ಲಿ ಕೊರೊನಾ ಬಗ್ಗೆ ನೋಡಿ ಜನ ಆತಂಕ ಆಗಿರಬಹುದು. ಸೇಫ್ಟಿಯ ಉದ್ದೇಶದಿಂದ ಬಾರದಿರುವ ಸಾಧ್ಯತೆ ಇದೆ ಎಂದು ಹೇಳಿದರು.
Advertisement
Advertisement
ಕೃಷ್ಣ ಮಠದ ಪಾರ್ಕಿಂಗ್ ಏರಿಯಾದ ವ್ಯಾಪಾರಿ ಹಿರೇಗೌಡ ಮಾತನಾಡಿ, ನಾವು ಪ್ರವಾಸಿಗರನ್ನು ನಂಬಿಯೇ ಇಲ್ಲಿ ಅಂಗಡಿ ಇಟ್ಟದ್ದು. ಪ್ರವಾಸಿಗರು ಬರದೆ ಇದ್ದರೆ ನಮಗೆ ವ್ಯಾಪಾರವೇ ಇಲ್ಲ. ಯಾಕೆಂದರೆ ಪಾರ್ಕಿಂಗ್ ಏರಿಯಾಕ್ಕೆ ಭಕ್ತರು ಮಾತ್ರ ಬರುವುದು. ಊರಿನವರು ಈ ಕಡೆಗೆ ಬರುವುದಿಲ್ಲ. ನಾವು ದಿನ ಬಾಡಿಗೆ ಕೊಟ್ಟು ಇಲ್ಲಿ ಅಂಗಡಿ ಇಟ್ಟದ್ದು, ಒಂದೊಂದು ದಿನ ಮಧ್ಯಾಹ್ನದವರೆಗೂ ಬೋಣಿ ಆಗುವುದಿಲ್ಲ. ಹಣ್ಣು ಮತ್ತು ಜ್ಯೂಸ್ ಅಂಗಡಿ ಅವರಿಗೆ ಸ್ವಲ್ಪ ವ್ಯಾಪಾರ ಆಗ್ತದೆ ಎಂದರು.