ವಾಷಿಂಗ್ಟನ್: ಭಾರತೀಯ ವಾಯು ಪಡೆಯ ನಡೆಸಿದ ಏರ್ ಸ್ಟ್ರೈಕ್ ಕುರಿತಾಗಿ ಚೀನಾ ಸೇರಿದಂತೆ ವಿಶ್ವದ ಯಾವುದೇ ದೇಶವೂ ನಮ್ಮ ಪರವಾಗಿ ಮಾತನಾಡುತ್ತಿಲ್ಲ ಎಂದು ಅಮೆರಿಕದಲ್ಲಿದ್ದ ಪಾಕಿಸ್ತಾನ ಮಾಜಿ ರಾಯಭಾರಿ ಹುಸೇನ್ ಹಖಾನಿ ಹೇಳಿದ್ದಾರೆ.
ಭಾರತದ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಗಡಿ ರೇಖೆ ದಾಟಿ ಬಂದು ದಾಳಿ ಮಾಡಿದ ಭಾರತವನ್ನು ಪ್ರಶ್ನಿಸುವ ಬದಲಾಗಿ, ಸಂಧಾನ ಮಾಡಿಕೊಳ್ಳುವಂತೆ ಚೀನಾ ಹೇಳುತ್ತಿದೆ. ಪಾಕಿಸ್ತಾನವು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಲು ಬಯಸುವುದಿಲ್ಲ. ಆದರೆ ಜಗತ್ತಿನಲ್ಲಿ ಪಾಕಿಸ್ತಾನ ಉಗ್ರ ಸಂಘಟನೆ ಸುರಕ್ಷಿತ ನೆಲೆಯಾಗಿದೆ ಎಂದು ದಾಳಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪಾಕಿಸ್ತಾನಿ ವಿದ್ವಾಂಸ ಮೊಯಿದ್ ಯೂಸಿಫ್ ಕೂಡ ಭಾರತದ ವಿರುದ್ಧ ಧ್ವನಿ ಎತ್ತಿದ್ದು, ಏರ್ ಸ್ಟ್ರೈಕ್ ಸಂಬಂಧ ಪಾಕಿಸ್ತಾನದ ಪರ ಜಾಗತಿಕಮಟ್ಟದಲ್ಲಿ ಯಾವುದೇ ಹೇಳಿಕೆಗಳು ಕೇಳಿ ಬರುತ್ತಿಲ್ಲ. ಎಲ್ಲರೂ ಭಾರತಕ್ಕೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಪಾಕಿಸ್ತಾನವು ದಾಳಿಯನ್ನು ಉಲ್ಬಣಗೊಳ್ಳಲು ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ.
ಪಾಕಿಸ್ತಾನವು ಪ್ರತಿ ದಾಳಿ ನಡೆಸಿದರೆ ಅಥವಾ ಭಾರತವು ಮತ್ತೆ ದಾಳಿ ಮುಂದುವರಿಸಿದರೆ ಪರಿಸ್ಥಿತಿ ಉಲ್ಬಣಗೊಳ್ಳುತ್ತದೆ. ಈ ಉಭಯ ದೇಶಗಳ ನಡುವಿನ ಮಧ್ಯೆ ಅಮೆರಿಕದಂತ ಬಲಿಷ್ಠ ದೇಶ ಪ್ರವೇಶ ಮಾಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕೈ ಮಿರುತ್ತದೆ ಎಂದು ಮೊಯಿದ್ ಯೂಸುಫ್ ಕೇಳಿಕೊಂಡಿದ್ದಾರೆ.
ಭಾರತೀಯ ವಾಯು ಪಡೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಬಹುದೊಡ್ಡ ನೆಲೆಯಾಗಿದ್ದ ಬಾಲಕೋಟ್ ಮೇಲೆ ಮಂಗಳವಾರ ದಾಳಿ ಮಾಡಿತ್ತು. ಈ ಮೂಲಕ ಗಡಿ ರೇಖೆಯನ್ನು ದಾಟಿ 80 ಕಿ.ಮೀ ಸಾಗಿ ಭಾರೀ ಪ್ರಮಾಣದಲ್ಲಿ ಭಯೋತ್ಪಾದಕರು, ತರಬೇತುದಾರರು ಹಾಗೂ ಉಗ್ರ ಸಂಘಟನೆಯ ಕಮಾಂಡರ್ ಗಳನ್ನು ಹತ್ಯೆ ಮಾಡಿದೆ. 1971ರ ಯುದ್ಧವನ್ನು ಹೊರತುಪಡಿಸಿ ಇದೇ ಮೊದಲ ಬಾರಿಗೆ (ಫೆಬ್ರವರಿ 26ರಂದು) ಭಾರತೀಯ ವಾಯು ಪಡೆ ಪಾಕಿಸ್ತಾನದ ಗಡಿ ದಾಟಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv