ರಾಯಚೂರು: ಜಿಲ್ಲೆಯಲ್ಲಿ ಎಲ್ಲಡೆ ಕೊರೊನಾ ಭೀತಿ ಹೆಚ್ಚಾಗಿದೆ. ಬಸ್, ರೈಲು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಚಿತ್ರಮಂದಿರ, ಶಾಪಿಂಗ್ ಮಾಲ್‍ಗಳು ಬಂದ್ ಆಗಿವೆ. ಆದರೆ ರಾಯಚೂರಿನ ತರಕಾರಿ ಮಾರುಕಟ್ಟೆಗೆ ಮಾತ್ರ ಯಾವುದೇ ಎಫೆಕ್ಟ್ ಆಗಿಲ್ಲ. ಎಂದಿನಂತೆ ಜನ ಉತ್ಸಾಹದಿಂದ ವ್ಯಾಪಾರ ವಹಿವಾಟು ನಡೆಸಿದ್ದಾರೆ.
ವ್ಯಾಪಾರಿಗಳು ಸಹ ಹೆಚ್ಚಿನ ಪ್ರಮಾಣದ ತರಕಾರಿಯನ್ನ ತಂದು ಮಾರಾಟ ಮಾಡುತ್ತಿದ್ದಾರೆ. ಹೊರಗಡೆಯಿಂದ ನಮಗೆ ಭೀತಿಯಿದೆ ಆದರೆ ರಾಯಚೂರಿನಲ್ಲಿ ಕೊರೊನಾ ಸೋಂಕು ಇಲ್ಲ ಅಂತ ಹೇಳುತ್ತಿದ್ದಾರೆ. ಇನ್ನೂ ಮಾಸ್ಕ್ ಸಿಗುತ್ತಿಲ್ಲವಾದ್ದರಿಂದ ಜನ ಮಾಸ್ಕ್ ಧರಿಸುವುದನ್ನು ಸಹ ಕಡಿಮೆಮಾಡಿದ್ದಾರೆ.
ಜಿಲ್ಲೆಯಲ್ಲಿ ವಿದೇಶದಿಂದ ಮರಳಿದ ಒಟ್ಟು 25 ಜನರ ಮೇಲೆ ನಿಗಾ ಇಡಲಾಗಿದೆ. ಮೂವರನ್ನ ರಿಮ್ಸ್ ಆಸ್ಪತ್ರೆಯ ವಿಶೇಷ ವಾರ್ಡ್ ಗೆ ದಾಖಲಿಸಲಾಗಿದೆ. ಯಾರಲ್ಲೂ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಎಲ್ಲಾ ಶಂಕಿತರ ಮಾದರಿಗಳನ್ನ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.