ಹಾಸನ: ದೇಶಕ್ಕೆ ಮಾಜಿ ಪ್ರಧಾನಿ ಕೊಟ್ಟ ಹಿರಿಮೆಯನ್ನು ಹಾಸನ ಜಿಲ್ಲೆ ಹೊಂದಿದೆ. ಅಲ್ಲದೆ ಓರ್ವ ಪುತ್ರ ಮಾಜಿ ಮುಖ್ಯಮಂತ್ರಿ, ಮತ್ತೊಬ್ಬರು ಪ್ರಭಾವಿ ರಾಜಕಾರಿಣಿಯಾಗಿದ್ದಾರೆ. ಮೊಮ್ಮಗರೊಬ್ಬರು ಸಂಸದರಾದ್ರೆ, ಸೊಸೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ. ಇಷ್ಟೆಲ್ಲ ಜನ ಪ್ರತಿನಿಧಿಸುವ ಕ್ಷೇತ್ರದ ಗ್ರಾಮವೊಂದರಲ್ಲಿ ಪುಟ್ಟ ಮಕ್ಕಳು ಜಗಲಿಯಲ್ಲೇ ಪಾಠ ಕೇಳುವಂತಾಗಿದೆ.
ಹೌದು. ಹೊಳೇನರಸೀಪುರ ತಾಲೂಕಿನ ಉಣ್ಣೆನ ಹಳ್ಳಿ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ಶಾಲಾ ಕಟ್ಟಡವಿಲ್ಲ. ಅದು ಹೇಗೋ ಗ್ರಾಮಸ್ಥರು ತಮ್ಮ ಸಂಘದ ಕಟ್ಟಡವನ್ನು ಶಾಲೆಗೆ ಕೊಟ್ಟು ಇಷ್ಟು ವರ್ಷ ತರಗತಿ ನಡೆಸಲು ಸಹಾಯ ಮಾಡಿದರು. ಆದರೆ ಇದೀಗ ಅವರು ಕೂಡ ತಮ್ಮ ಕಟ್ಟಡಕ್ಕೆ ಬೀಗ ಜಡಿದಿದ್ದು ಪುಟ್ಟ ಪುಟ್ಟ ಮಕ್ಕಳೀಗ ಶಾಲಾ ಕಟ್ಟಡದ ಜಗಲಿಯಲ್ಲಿ ಕುಳಿತು ಪಾಠ ಕಲಿಯುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
Advertisement
Advertisement
ಇಪ್ಪತ್ತೊಂದನೆಯ ಶತಮಾನದಲ್ಲಿ ಇಷ್ಟೆಲ್ಲ ರಾಜಕೀಯ ದಿಗ್ಗಜರು ಇರುವ ಗ್ರಾಮದಲ್ಲಿ ಈ ಪರಿಸ್ಥಿತಿ ಇದೆ ಎಂದರೆ ನಿಜಕ್ಕೂ ವಿರ್ಯಾಸವೇ ಸರಿ. ಈ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡ ಶಿಥಿಲವಾಗಿದೆ. ಹೀಗಾಗಿ ಪುಟ್ಟ ಮಕ್ಕಳ ಶಿಕ್ಷಣಕ್ಕೆ ಸ್ಪಂದಿಸಿದ ಗ್ರಾಮಸ್ಥರು ಯುವಕರ ಸಂಘದ ಕಚೇರಿಯ ಕಟ್ಟಡವನ್ನೇ ಬಿಟ್ಟುಕೊಟ್ಟಿದ್ದರು. ಆದರೆ ಇದೀಗ ಅದಕ್ಕೆ ಬೀಗ ಜಡಿದ ಪರಿಣಾಮ ಈ ವಿದ್ಯಾರ್ಥಿಗಳು ಕಟ್ಟಡದ ಹೊರಗಡೆಯೇ ಪಾಠ ಕೇಳುವಂತಾಗಿದೆ.
Advertisement
ಒಟ್ಟು 1ರಿಂದ 5ನೇ ತರಗತಿಯವರೆಗೆ 20 ಮಕ್ಕಳು ವಿದ್ಯಾರ್ಥಿಗಳಿದ್ದಾರೆ. ಎಲ್ಲ ತರಗತಿಗಳಿಗೂ ಒಂದೇ ಕೊಠಡಿ. ಅದರಲ್ಲೇ ಎಲ್ಲ ತರಗತಿಗಳಿಗೆ ಪಾಠದ ಜೊತೆಗೆ ಬಿಸಿಯೂಟದ ಅಡುಗೆ ಕೂಡ ಅಲ್ಲಿಯೇ ಮಾಡಲಾಗುತ್ತಿದೆ. ಇದರಿಂದ ಅತ್ತ ಸರಿಯಾಗಿ ಪಾಠ ಹೇಳಿಕೊಡಲೂ ಆಗದೆ ಹಿರಿಯ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗದೇ ಶಿಕ್ಷಕರು ಕೂಡ ಹೈರಾಣಾಗಿದ್ದಾರೆ.
Advertisement
ಇಪ್ಪತ್ತು ವಿದ್ಯಾರ್ಥಿಗಳು ಜಗಲಿ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಈ ವಿದ್ಯಾರ್ಥಿಗಳಿಗೆ ಇದೇ ಗತಿಯಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡಿರುವ ಗ್ರಾಮಸ್ಥರು ತಮ್ಮ ಊರಿನ ಶಾಲೆಗೆ ನೂತನ ಕಟ್ಟಡ ಕಟ್ಟಿಕೊಡಬೇಕೆಂದು ಆಗ್ರಹಿಸಿದ್ದಾರೆ.