ಪ್ರತಿಯೊಂದು ದೇಶವು ತನ್ನದೇ ಆದ ವಿಭಿನ್ನ ನಿಯಮಗಳನ್ನ ರೂಪಿಸಿದೆ. ತನ್ನಲ್ಲಿರುವ ಪ್ರಜೆಗಳು ಸೇರಿದಂತೆ ಬೇರೆ ದೇಶದಿಂದ ಆಗಮಿಸುವ ಪ್ರವಾಸಿಗಳಿಗೂ ವಿಭಿನ್ನ ಉದ್ದೇಶದೊಂದಿಗೆ ನಿಯಮಗಳನ್ನ ರಚಿಸಿದೆ. ಅದರಂತೆ ಅಮೆರಿಕ ಕೂಡ ಒಂದಿಲ್ಲೊಂದು ವಿಷಯದ ಮೂಲಕ ಸುದ್ದಿಯಲ್ಲಿರುತ್ತದೆ. ಇದೀಗ ಅಮೆರಿಕ ಬರ್ತ್ ಟೂರಿಸಂ ನಿಷೇಧಿಸಿದೆ. ಏನಿದು? ಇದರಿಂದ ಭಾರತೀಯರ ಮೇಲೆ ಆಗುವ ಪರಿಣಾಮಗಳೇನು? ಇದೆಲ್ಲದರ ಕುರಿತು ಮಾಹಿತಿ ಇಲ್ಲಿದೆ
ಹೌದು, ಅಮೆರಿಕಕ್ಕೇ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಕೂಡ ವಿಭಿನ್ನ ನಿಯಮಗಳಿವೆ. ಆದರೂ ಕೂಡ ಅಮೆರಿಕ ಪೌರತ್ವ ಪಡೆಯುವ ಉದ್ದೇಶದಿಂದ ಅಲ್ಲಿಗೆ ಹೋಗುವ ಪ್ರವಾಸಿಗರು ವೀಸಾ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಅಮೆರಿಕ ಸರ್ಕಾರ ಎಚ್ಚೆತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ನಿರತವಾಗಿದೆ.

ಏನಿದು ಬರ್ತ್ ಟೂರಿಸಂ?
ಗರ್ಭಿಣಿಯರು ಹೆರಿಗೆಗೂ ಮುನ್ನ ಅಮೆರಿಕಕ್ಕೆ ತೆರಳಿ, ಅಲ್ಲಿ ಮಗುವಿಗೆ ಜನ್ಮ ನೀಡಿದಾಗ ಆ ಮಗುವಿಗೆ ಅಮೆರಿಕಾದ ಪೌರತ್ವ ಸಿಗುತ್ತದೆ. ಈ ಉದ್ದೇಶವನ್ನಿಟ್ಟುಕೊಂಡು ಅಮೆರಿಕಕ್ಕೆ ಪ್ರಯಾಣಿಸುವುದನ್ನ ಬರ್ತ್ ಟೂರಿಸಂ ಎನ್ನುತ್ತಾರೆ.
ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಸಾ ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಸಮರ ಸಾರಿದ್ದಾರೆ. ಕಳೆದ ವಾರ ದೆಹಲಿಯಲ್ಲಿರುವ ಅಮೆರಿಕ ರಾಯಭಾರಿ ಕಛೇರಿ ಪ್ರವಾಸಿ ವೀಸಾ ಪಡೆದುಕೊಳ್ಳಲು ಇಚ್ಚಿಸುವ ಭಾರತೀಯ ಅರ್ಜಿದಾರರಿಗೆ ಎಚ್ಚರಿಕೆ ನೀಡಿದೆ. ಮಗುವಿಗೆ ಜನ್ಮ ನೀಡುವ ಮುನ್ನ ಅಮೆರಿಕಕ್ಕೆ ಪ್ರಯಾಣಿಸಲು ಬಯಸುವವರಿಗೆ ಅಂದರೆ ತಕ್ಷಣದ ವೀಸಾ ಪಡೆಯುವವರ ಅರ್ಜಿಗಳನ್ನು ನಿರಾಕರಿಸಲಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡಿದೆ. ಸಾಮಾನ್ಯವಾಗಿ ಹೆರಿಗೆಗೂ ಮುನ್ನ ಅಮೆರಿಕಕ್ಕೆ ತೆರಳುವ ಪ್ರಯಾಣಿಕರು ಯುಎಸ್ ಸಂದರ್ಶಕ ವಿಸಾದಡಿಯಲ್ಲಿ ಬರುವುದಿಲ್ಲ. ಹೀಗಾಗಿ ನಿಜವಾಗಿಯೂ ಅಮೆರಿಕಕ್ಕೆ ಪ್ರಯಾಣದ ಅಥವಾ ಪ್ರವಾಸದ ಉದ್ದೇಶದಿಂದ ತೆರಳುವವರಿಗೆ ಮಾತ್ರ ಸಂದರ್ಶಕ ವೀಸಾ ನೀಡಲಾಗುವುದು. ಬದಲಿಗೆ ಪೌರತ್ವ ಪಡೆಯುವ ಉದ್ದೇಶದಿಂದ ಪ್ರಯಾಣಿಸುವವರಿಗೆ ಈ ವೀಸಾಗಳನ್ನು ನೀಡುವುದಿಲ್ಲ. ಈ ಹಿನ್ನೆಲೆ ಅಧಿಕಾರಿಗಳು ವೀಸಾ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ ಎಂದು ರಾಯಭಾರಿ ಕಚೇರಿ ತಿಳಿಸಿದೆ.

ಸಂದರ್ಶಕ ವೀಸಾ ಅರ್ಜಿಗಳನ್ನು ಪರಿಶೀಲಿಸುವಾಗ ಒಂದು ವೇಳೆ ಈ ಅರ್ಜಿ ಪೌರತ್ವ ಪಡೆಯುವ ಉದ್ದೇಶ ಹೊಂದಿದೆ ಎಂದು ತಿಳಿದುಬಂದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಈ ರೀತಿ ಪೌರತ್ವ ಪಡೆಯುವ ಅನುಮತಿ ಇಲ್ಲ ಎಂದಿದೆ.
ಈ ನಿರ್ಧಾರದ ಹಿಂದಿನ ಉದ್ದೇಶದಿಂದ ಯಾವುದೇ ರೀತಿಯ ಗರ್ಭಿಣಿಯರಿಗೆ, ದಂಪತಿಗಳಿಗೆ ಹಾಗೂ ಹೊಸದಾಗಿ ಮದುವೆಯಾಗಿರುವ ಅರ್ಜಿದಾರರ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಾಗಿ ಪೌರತ್ವ ಪಡೆಯುವ ಕಾನೂನನ್ನು ಬಲಪಡಿಸುವ ಉದ್ದೇಶ ಹೊಂದಿದೆ.
ಏನಿದರ ಹಿಂದಿನ ಕಾರಣ?
- ಇದು ಯಾವುದೇ ರೀತಿಯ ಪ್ರಯಾಣಿಕರ ಮೇಲೆ ಅಥವಾ ಪ್ರವಾಸಿಗರ ಮೇಲೆ ಪರಿಣಾಮ ಬೀರುವ ಉದ್ದೇಶ ಹೊಂದಿಲ್ಲ. ಬದಲಿಗೆ ಕಾನೂನು ದೃಷ್ಟಿಕೋನದಿಂದ ವಲಸೆ ಕಾಯ್ದೆ ಅಡಿಯಲ್ಲಿ ಅರ್ಜಿದಾರರು ವೀಸಾ ಪಡೆಯುವ ಹಿಂದಿನ ಉದ್ದೇಶವನ್ನು ತಿಳಿಯಬಯಸುತ್ತದೆ. ಆದರೆ ಈ ನಿಯಮ ಹೊಸದೇನಲ್ಲ. ಈ ಹಿಂದೆಯೂ ಈ ಸಂಬಂಧ ಚರ್ಚೆ ನಡೆಸಲಾಗಿತ್ತು. ಪ್ರಯಾಣಿಕರು ಪ್ರಯಾಣಿಸುವ ಯೋಜನೆ ಹಾಗೂ ಉದ್ದೇಶದ ನಡುವೆ ಸಂಬಂಧ ವಿರುವುದಿಲ್ಲ. ಹೀಗಾಗಿ ಅರ್ಜಿಗಳ ತೀವ್ರ ಪರಿಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
- ಇನ್ನು ಪೌರತ್ವ ಪಡೆಯುವ ಉದ್ದೇಶದಿಂದ ಅಮೆರಿಕಕ್ಕೆ ತೆರಳುತ್ತಿದ್ದಾರೆ ಎಂದುಕೊಂಡು ಗರ್ಭಿಣಿಯರಿಗೆ ಅಮೆರಿಕ ಪ್ರವೇಶ ನಿಷೇಧಿಸಲಾಗುವುದಿಲ್ಲ. ಬದಲಿಗೆ ಪ್ರಯಾಣದ ಯೋಜನೆ, ವೈದ್ಯಕೀಯ ವೆಚ್ಚಗಳನ್ನು ಧರಿಸುವ ಆರ್ಥಿಕ ಸಾಮರ್ಥ್ಯ ಸೇರಿದಂತಹ ಹೆಚ್ಚುವರಿ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.
- ಉದ್ಯೋಗ, ಕುಟುಂಬದ ಜವಾಬ್ದಾರಿ, ಈ ಮೊದಲು ಪ್ರಯಾಣಿಸಿದ ದಾಖಲೆಗಳು ಸೇರಿದಂತೆ ಬಲವಾದ ಪುರಾವೆಗಳನ್ನು ನೀಡಬೇಕಾಗುತ್ತದೆ

ಏನಿದು B1 ಮತ್ತು B2 ವೀಸಾ?
ವ್ಯಾಪಾರದ ಉದ್ದೇಶದಿಂದ B1 ವೀಸಾ ವನ್ನು ನೀಡಲಾಗುತ್ತದೆ ಹಾಗೂ B2 ಪ್ರಭಾಸೋದ್ಯಮಕ್ಕಾಗಿ ಈ ವೀಸಾ ನೀಡಲಾಗುತ್ತದೆ. ರಜೆ ದಿನದಲ್ಲಿ ಸ್ನೇಹಿತರು ಸಂಬಂಧಿಕರನ್ನ ಭೇಟಿ ಮಾಡಲು ಅಥವಾ ಅಲ್ಪಾವಧಿಯ ವೈದ್ಯಕೀಯ ಚಿಕಿತ್ಸೆ ಪಡೆಯಲು ಈ ವೀಸಾ ಗಳನ್ನು ಬಳಸಬಹುದು.
ಅಮೆರಿಕ ಸಂವಿಧಾನದ 14ನೇ ತಿದ್ದುಪಡಿ ಪ್ರಕಾರ ಅಮೆರಿಕದ ನೆಲದಲ್ಲಿ ಜನಿಸಿದ ಯಾವುದೇ ಮಗುವಿಗೂ ಪೋಷಕರ ಮೂಲ ಸ್ಥಳ ಯಾವುದನ್ನು ಲೆಕ್ಕಿಸದೆ ಅಮೆರಿಕದ ಪೌರತ್ವ ದೊರೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ವಿಷಯವು ರಾಜಕೀಯ ಚರ್ಚೆಗೆ ಆಸ್ಪದ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಮೊದಲ ಅವಧಿಯಲ್ಲಿಯೇ ಈ ಬಗ್ಗೆ ಮಾತನಾಡಿದ್ದರು. 2020 ರ ಜನವರಿಯಲ್ಲಿ ಈ ಬರ್ತ್ ಟೂರಿಸಂ ಅನ್ನು ಕೊನೆಗೊಳಿಸುವ ಕ್ರಮ ಕೈಗೊಂಡಿದ್ದರು.
ಇದಾದ ಬಳಿಕ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧಿಕಾರಕ್ಕೆ ಮರಳಿದ ನಂತರ 2025 ಜನವರಿ 20ರಂದು ಅಮೆರಿಕ ನೆಲದಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ ಜನ್ಮಸಿದ್ಧ ಪೌರತ್ವ ದೊರೆಯುತ್ತದೆ ಎಂಬ ಕಾನೂನಿಗೆ ಅಂತ್ಯ ಹಾಡಿದರು.
ಸದ್ಯ ಈ ವಿಷಯ ನ್ಯಾಯಾಲಯದ ಮೆಟ್ಟಿಲಿನಲ್ಲಿದ್ದು, ಚರ್ಚೆ ನಡೆಯುತ್ತಿದೆ.

