ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ದಿದ್ರೆ ಸಿಮ್ ಸಿಗಲ್ಲ!

Public TV
1 Min Read
ADHAR SIM

ನವದೆಹಲಿ: ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲವೆಂದಲ್ಲಿ ಇನ್ನು ಮುಂದೆ ಮೊಬೈಲ್ ಸಿಮ್ ಕಾರ್ಡ್ ಸಿಗಲ್ಲ.

ಹೌದು. ಈಗಾಗಲೇ ಆದಾಯ ತೆರಿಗೆ ಲೆಕ್ಕಪತ್ರ(ಐಟಿ ರಿಟರ್ನ್ಸ್) ಸಲ್ಲಿಸುವ ವೇಳೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಹೇಳಿರುವ ಕೇಂದ್ರ ಸರ್ಕಾರ ಇದೀಗ ಮೊಬೈಲ್ ಸಿಮ್ ಪಡೆಯಲು ಕೂಡ ಆಧಾರ್ ಕಾರ್ಡ್ ಕಡ್ಡಾಯ ಮಾಡಲು ಮುಂದಾಗಿದೆ.

ಈ ಸಂಬಂಧ ಟೆಲಿಕಾಂ ಇಲಾಖೆ ಎಲ್ಲಾ ಟೆಲಿಕಾಂ ಕಂಪೆನಿಗಳಿಗೂ ನೋಟಿಸ್ ಕಳುಹಿಸಿದ್ದು, ಮೊಬೈಲ್ ಚಂದಾದಾರರ ಸಿಮ್ ಕಾರ್ಡ್‍ಗಳು ಅವರ ಆಧಾರ್ ನಂಬರ್ ಜೊತೆ ಲಿಂಕ್ ಆಗಿದೆಯೋ ಅಥವಾ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದೆ. ಮಾತ್ರವಲ್ಲದೇ ಈ ಪ್ರಕ್ರಿಯೆ ವರ್ಷದೊಳಗೆ ಪೂರ್ಣಗೊಳಿಸಬೇಕು ಅಂತಾ ಇಲಾಖೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಎಲ್ಲಾ ಗ್ರಾಹಕರ ದಾಖಲೆಗಳನ್ನು ಆಧಾರ್ ಕಾರ್ಡ್ ಇ- ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆವೈಸಿ) ಮೂಲಕ ಮರುಪರಿಶೀಲನೆ ಮಾಡಲಿವೆ.

ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ವೆರಿಫಿಕೇಶನ್ ಕೋಡ್ ನ್ನು ಕಳುಹಿಸಲಿವೆ. ಭವಿಷ್ಯದಲ್ಲಿ ವ್ಯಕ್ತಿಯ ಗುರುತು ಪತ್ತೆಗೆ ಆಧಾರ್ ಕಾರ್ಡ್ ಏಕೈಕ ಸಾಧನವಾಗಲಿದೆ ಅಂತಾ ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು.

ಪಾನ್ ಕಾರ್ಡ್, ಐಟಿ ರಿಟರ್ನ್ಸ್ ಗೂ ಆಧಾರ್ ಕಡ್ಡಾಯ: ಕಳೆದ ಮಂಗಳವಾರವಷ್ಟೇ ಸಂಸತ್ತಿನಲ್ಲಿ ಚರ್ಚೆಯಾದ ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ತಂದು ಆಧಾರ್ ಕಡ್ಡಾಯ ಎಂಬ ಅಂಶವನ್ನು ಕೇಂದ್ರ ಸರ್ಕಾರ ಸೇರಿಸಿತ್ತು. ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದೆ ಅಂತಾ ಹೇಳಲಾಗಿದೆ.

ದೇಶದಲ್ಲಿ ಮೊದಲ ಬಾರಿಗೆ ರಿಲಯನ್ಸ್ ಜಿಯೋ ಕಂಪೆನಿ ಆಧಾರ್ ಕಾರ್ಡ್ ಮೂಲಕ ಗ್ರಾಹಕರಿಗೆ ಸಿಮ್ ಕಾರ್ಡನ್ನು ಕೆಲವೇ ನಿಮಿಷಗಳಲ್ಲಿ ವಿತರಣೆ ಮಾಡಿತ್ತು. ಗ್ರಾಹಕರು ಬೆರಳಚ್ಚು ಓತ್ತಿದಾಗಲೇ ಆಧಾರ್ ದಾಖಲೆಗಳು ಸ್ಕ್ರೀನ್‍ನಲ್ಲಿ ಕಾಣುತಿತ್ತು.

Share This Article
Leave a Comment

Leave a Reply

Your email address will not be published. Required fields are marked *