ಚಲಿಸ್ತಿದ್ದ ರೈಲಿನ ಬೋಗಿ ಧಗಧಗ – ಸಾವಿರಾರು ಜನರ ಪ್ರಾಣ ಉಳಿಸಿದ ಮಹಿಳೆ

Public TV
1 Min Read
UDP TAIN

ಉಡುಪಿ: ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಹಿಳಾ ಪ್ರಯಾಣಿಕರೊಬ್ಬರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಬೈಂದೂರು ರೈಲ್ವೆ ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿರುವ ಕಂಬದ ಕೋಣೆಯಲ್ಲಿ ಹಾದು ಹೋಗುವಾಗ ಈ ಅವಘಡ ಸಂಭವಿಸಿದೆ. ರೈಲಿನ ಎಸಿ ಕೋಚ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೊದಲು ಬೆಂಕಿ ಹೊತ್ತಿಕೊಂಡಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಮಹಿಳೆಯೊಬ್ಬರ ಸಮಯ ಪ್ರಜ್ಞೆಯಿಂದ ಅಪಾಯ ತಪ್ಪಿದೆ.

ಮುಂಬೈನಿಂದ ಎರ್ನಾಕುಲಂಗೆ ನಿಜಾಮುದ್ದೀನ್ ಎಕ್ಸ್ ಪ್ರೆಸ್ (12618) ರೈಲು ಹೋಗುತ್ತಿತ್ತು. ಬೆಳಗ್ಗಿನ ಜಾವ ಸುಮಾರು 1.20ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ ವೇಳೆ ಪ್ರಯಾಣಿಕರು ಮಲಗಿದ್ದರಿಂದ ಯಾರಿಗೂ ಆರಂಭದಲ್ಲಿ ಗೊತ್ತಾಗಲಿಲ್ಲ. ಕುಂದಾಪುರ ನಿಲ್ದಾಣದಲ್ಲಿ ಇಳಿಯಬೇಕಾಗಿರುವ ಮಹಿಳೆಯೊಬ್ಬಳು ಇದನ್ನು ಗಮನಿಸಿ ತಕ್ಷಣ ಆಲರ್ಟ್ ಆಗಿದ್ದಾರೆ.

ಮಹಿಳೆ ನಂತರ ಸಿಬ್ಬಂದಿ ಗಮನಕ್ಕೆ ತಂದಿದ್ದು, ತಕ್ಷಣವೇ ರೈಲನ್ನು ಬೈಂದೂರು ತಾಲೂಕಿನ ಸೇನಾಪುರ ಮತ್ತು ಬಿಜೂರು ಗ್ರಾಮದ ಮಧ್ಯೆ ನಿಲ್ಲಿಸಿ ಬೆಂಕಿ ನಂದಿಸಲಾಗಿದೆ. ಎಸಿ ಬೋಗಿಯ ಗ್ಲಾಸ್ ಒಡೆಯುವಾಗ ಸಂಭವಿಸಿದ ಸಣ್ಣಪುಟ್ಟ ಗಾಯ ಹೊರತು ಪಡಿಸಿ ಯಾವುದೇ ಅಪಾಯ ಸಂಭವಿಸಿಲ್ಲ.

ಬೆಂಕಿ ಹತ್ತಿದ ಬೋಗಿಯನ್ನು ಪ್ರತ್ಯೇಕಿಸಿ, ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿ ಕೇರಳದ ಎರ್ನಾಕುಲಂಗೆ ರೈಲನ್ನು ಕಳುಹಿಸಲಾಗಿದ್ದು, ಸುರಕ್ಷಿತವಾಗಿ ಪ್ರಯಾಣಿಕರು ಎರ್ನಾಕುಲಂ ತಲುಪಿದ್ದಾರೆ. ಎಸಿ ಬೋಗಿಯಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಈ ಬೆಂಕಿ ಅವಘಢ ಸಂಭವಿಸಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *