ನವದೆಹಲಿ: ಹಸಿರು ಹೈಡ್ರೋಜನ್ ಮತ್ತು ಶುದ್ಧ ಇಂಧನ ಉತ್ತೇಜಿಸುವ ಸರ್ಕಾರದ ಬದ್ಧತೆಗೆ ಪ್ರತೀಕ ಎಂಬಂತೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಂದು (ಜ.6) ಟೊಯೋಟಾ ಮಿರೈ (Toyota Mirai) ಇಂಧನ ಕೋಶ ವಿದ್ಯುತ್ ವಾಹನದಲ್ಲಿ (FCEV) ಪ್ರಯಾಣಿಸಿ ಗಮನ ಸೆಳೆದರು.
ಸಚಿವ ಪ್ರಹ್ಲಾದ್ ಜೋಶಿ ಅವರು ದೆಹಲಿಯ ಭಾರತ್ ಮಂಟಪದಿಂದ ನಿತಿನ್ ಗಡ್ಕರಿ ಅವರ ನಿವಾಸದವರೆಗೆ ಮಿರೈ ಹಸಿರು ಇಂಧನ ಚಾಲಿತ ಕಾರನ್ನು ಸ್ವತಃ ಚಾಲನೆ ಮಾಡಿದರು. ಇದನ್ನೂ ಓದಿ: ತಮಿಳುನಾಡಿನ ದೀಪೋತ್ಸವಕ್ಕೆ ಅನುಮತಿ – ಡಿಎಂಕೆ ಸರ್ಕಾರಕ್ಕೆ ಹಿನ್ನಡೆ, ಕೋರ್ಟ್ ತೀರ್ಪಿಗೆ ಭಕ್ತರ ಸಂತಸ
ಟೊಯೋಟಾ ಮಿರೈ ವಿಶೇಷತೆ:
ಎರಡನೇ ತಲೆಮಾರಿನ ಹೈಡ್ರೋಜನ್ ಇಂಧನ ಕೋಶ ವಿದ್ಯುತ್ ವಾಹನವಾದ (FCEV) ಟೊಯೋಟಾ `ಮಿರೈ’ ಹೈಡ್ರೋಜನ್ ಮತ್ತು ಆಮ್ಲಜನಕದ ನಡುವಿನ ರಾಸಾಯನಿಕ ಕ್ರಿಯೆ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ. ಉಪ-ಉತ್ಪನ್ನವಾಗಿ ನೀರಿನ ಆವಿಯನ್ನು ಮಾತ್ರ ಹೊರಸೂಸುತ್ತದೆ. ಸರಿಸುಮಾರು 650 ಕಿ.ಮೀ. ಚಾಲನಾ ವ್ಯಾಪ್ತಿ ಮತ್ತು ಐದು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಇಂಧನ ತುಂಬುವ ಸಾಮರ್ಥ್ಯ ಹೊಂದಿದೆ. ಇದು ವಿಶ್ವದ ಅತ್ಯಂತ ಮುಂದುವರಿದ ಮತ್ತು ಪರಿಣಾಮಕಾರಿ ಶೂನ್ಯ-ಹೊರಸೂಸುವಿಕೆ ವಾಹನಗಳಲ್ಲಿ ಒಂದಾಗಿದೆ.

