– ಕೈಲಾಸ ಮಾನ್ಯತೆ ಪಡೆದ ದೇಶವೇ ಅಥವಾ ಕಾಲ್ಪನಿಕವೇ?
ಅದೊಂದು ವಿಶ್ವಮಟ್ಟದ ಮಹಾಸಭೆ. ಆ ಸಭೆಯಲ್ಲಿ ಕೇಸರಿ ಬಣ್ಣದ ಸೀರೆಯುಟ್ಟು, ತಲೆಗೆ ಟರ್ಬನ್ ಹಾಕಿಕೊಂಡು ತನ್ನ ದೇಶದ ಬಗ್ಗೆ ಮಾತನಾಡುತ್ತ ‘ಕೈಲಾಸ’ ಕನ್ಯೆಯೊಬ್ಬಳು ಕ್ಷಣಮಾತ್ರದಲ್ಲಿ ವಿಶ್ವದ ಗಮನ ಸೆಳೆದಿದ್ದಳು. ಆ ಸಂದರ್ಭದಲ್ಲಿ ಯಾರೀ ಸುಂದರಿ? ಇವಳು ಪ್ರತಿನಿಧಿಸುತ್ತಿರುವ ದೇಶ ಯಾವುದು? ಹೀಗೆ ಹಲವು ಪ್ರಶ್ನೆಗಳು ಮೂಡಿದ್ದಂತೂ ನಿಜ. ಆ ಕೈಲಾಸ ಕನ್ಯೆ, ಸುಂದರಿ ಬೇರಾರು ಅಲ್ಲ. ಸ್ವಯಂಘೋಷಿತ ದೇವಮಾನವ ನಿತ್ಯಾನಂದ (Nithyananda) ಸ್ಥಾಪಿಸಿದ್ದಾರೆ ಎನ್ನಲಾದ ಕೈಲಾಸ (Kailasa) ದೇಶದ ಪ್ರತಿನಿಧಿ ಎಂಬುದು ನಂತರ ಎಲ್ಲರಿಗೂ ತಿಳಿಯಿತು.
ಅದೇನೇ ಇರಲಿ, ಜಿನೀವಾದಲ್ಲಿ ಈಚೆಗೆ ನಡೆದ ಸಭೆಯಲ್ಲಿ ವಿಶೇಷ ವೇಷಭೂಷಣದೊಂದಿಗೆ ಕಾಣಿಕೊಂಡು ಕೈಲಾಸ ದೇಶ ಪ್ರತಿನಿಧಿ ವಿಜಯಪ್ರಿಯ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡರು. ಜೊತೆಗೆ ಸಭೆಯಲ್ಲಿ ಆಕೆಯಾಡಿದ ಮಾತುಗಳು ಅಷ್ಟೇ ವಿವಾದವನ್ನು ಹುಟ್ಟುಹಾಕಿತು. ಇದೊಂದು ವಿಚಾರದಿಂದ ಕೈಲಾಸ ದೇಶ ಸಂಸ್ಥಾಪಕ ನಿತ್ಯಾನಂದ ಕೂಡ ಮತ್ತೆ ಮುನ್ನಲೆಗೆ ಬಂದರು. ಈಗಂತೂ ಒಂದಲ್ಲ ಒಂದು ಕಾರಣಕ್ಕೆ ಕೈಲಾಸ ಸುಂದರಿ ಮತ್ತು ನಿತ್ಯಾನಂದನ ಕೈಲಾಸ ದೇಶದ ಬಗ್ಗೆ ಚರ್ಚೆಯಾಗುತ್ತಲೇ ಇದೆ.
Advertisement
Advertisement
ಚರ್ಚೆಯಾಗುತ್ತಿರುವ ವಿಷಯ ಯಾವುದು ಅಂತೀರಾ? ಅದೇ ‘ಕೈಲಾಸ ದೇಶ’. ನಾವೆಲ್ಲ ಅಜ್ಞಾತ ಸ್ಥಳದಲ್ಲಿರುವ ಕೈಲಾಸ ದೇಶದ ಬಗ್ಗೆ ಕೇಳಿದ್ದೇವೆ ಅಷ್ಟೆ. ಆ ದೇಶ ಕಾಲ್ಪನಿಕವೇ ಅಥವಾ ನಿಜಬವಾಗಿಯು ಇದೆಯೇ? ಇದ್ದರೆ ಮಾನ್ಯತೆ ಪಡೆದಿದೆಯೇ? ಅಲ್ಲಿಗೆ ಹೋಗಿ ವಾಸಿಸಲು ಇತರೆ ದೇಶಗಳಲ್ಲಿ ಇರುವಂತೆ ನೀತಿ-ನಿಯಮಗಳೇನಾದರು ಇವೆಯೇ ಎಂಬೆಲ್ಲ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.
Advertisement
ಕೈಲಾಸ ಕಾಲ್ಪನಿಕ ದೇಶವೇ?: ಅತ್ಯಾಚಾರದ ಆರೋಪದ ಮೇಲೆ ಕಾನೂನು ಕ್ರಮದ ಸಂಕಷ್ಟಕ್ಕೆ ಸಿಲುಕಿ ಭಾರತದಿಂದ (India) ನಾಪತ್ತೆಯಾಗಿ ನಿಗೂಢ ಸ್ಥಳದಲ್ಲಿದ್ದ ಎನ್ನುವಷ್ಟರಲ್ಲಿ ಈಕ್ವೆಡಾರ್ ಬಳಿ ಕೈಲಾಸ ದೇಶ ಸ್ಥಾಪಿಸಿಕೊಂಡಿದ್ದಾನೆ. ಅಲ್ಲಿ 20 ಲಕ್ಷ ಹಿಂದೂಗಳ ಜನಸಂಖ್ಯೆಯಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದರೂ, ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿಲ್ಲ. ಕೈಲಾಸ ಗಣರಾಜ್ಯವು ಇನ್ನೂ ನಿತ್ಯಾನಂದರಿಂದ ಸ್ವಘೋಷಿತ ರಾಷ್ಟ್ರವಾಗಿದೆ. ಪ್ರಸ್ತುತ ದೇಶವಾಗಿ ಯಾವುದೇ ಅಂತಾರಾಷ್ಟ್ರೀಯ ಮನ್ನಣೆಯನ್ನು ಹೊಂದಿಲ್ಲ. ಯುಎನ್ ಅವರಿಗೆ ರಾಷ್ಟ್ರವಾಗಿ ಮಾನ್ಯತೆ ನೀಡದಿದ್ದರೂ, ಈಕ್ವೆಡಾರ್ ಬಳಿ ಕೈಲಾಸ ಎಂಬ ಹೆಸರಿನ ದೇಶವನ್ನು ನಿರ್ಮಿಸಿದ್ದಾನೆ. ಇದು ತನ್ನ ದೇಶ ಎಂಬಂತೆ ನಿತ್ಯಾನಂದ ಬಿಂಬಿಸುತ್ತಿದ್ದಾನೆ.
Advertisement
ನಿತ್ಯಾನಂದನ ದೇಶಕ್ಕೂ ಇದೆ ಧ್ವಜ, ಲಾಂಛನ, ಪಾಸ್‌ಪೋರ್ಟ್: ಕೈಲಾಸ ದೇಶದಲ್ಲಿ ಧ್ವಜ, ಲಾಂಛನ, ಪಾಸ್‌ಪೋರ್ಟ್ ಗಳಿವೆ. ಅಷ್ಟೇ ಅಲ್ಲದೇ ಕೈಲಾಸದಲ್ಲಿ ಪ್ರಧಾನಿ ಸೇರಿದಂತೆ ಸಚಿವ ಸಂಪುಟನ್ನು ಸಹ ರಚಿಸಲಾಗಿದೆ. ಕೈಲಾಸದ ಪಾಸ್‌ಪೋರ್ಟ್ ಎರಡು ಮಾದರಿಗಳಲ್ಲಿದೆ. ಒಂದು ಬಂಗಾರದ ಬಣ್ಣದ್ದಾಗಿದ್ದರೆ, ಇನ್ನೊಂದು ಕೆಂಪು ಬಣ್ಣದ್ದಾಗಿದೆ. ದೇಶದ ಧ್ವಜವು ಮೆರೂನ್ ಬಣ್ಣದ್ದಾಗಿದೆ. ಇದರಲ್ಲಿ ಎರಡು ಲಾಂಚನಗಳಿದ್ದು, ಒಂದು ನಿತ್ಯಾನಂದ ಹಾಗೂ ಇನ್ನೊಂದು ನಂದಿಯ ಚಿತ್ರವಾಗಿದೆ.
ಕೈಲಾಸಕ್ಕೆ ಹೋಗೋದು ಅಷ್ಟು ಸುಲಭ ಅಲ್ಲ!: ಕೈಲಾಸ ದೇಶಕ್ಕೆ ಹೋಗಲು ಯಾವುದೇ ನಿರ್ಬಂಧಗಳಿಲ್ಲ. ವಿಶ್ವದ ಯಾವುದೇ ಮೂಲೆಗಳಿಂದ ಹಿಂದೂಗಳು ಈ ದೇಶಕ್ಕೆ ಬರಬಹುದಾಗಿದೆ. ಆದರೆ ನಿತ್ಯಾನಂದನ ಕೈಲಾಸಕ್ಕೆ ಹೋಗುವುದು ಎಂದರೆ ಅಷ್ಟು ಸುಲಭದ ಕೆಲಸವಲ್ಲ. ಅಲ್ಲಿ ಹೋಗುವುವರು ಬಹುಮುಖ್ಯವಾಗಿ ಹಿಂದೂಗಳಾಗಿರಬೇಕು. ಅದರ ಜೊತೆಗೆ ನಿತ್ಯಾನಂದನ ಅನುಯಾಯಿಗಳಾಗಿರಬೇಕು. ಕೇವಲ ನಿತ್ಯಾನಂದನ ಅನುಯಾಯಿ ಆದರೊಂದೇ ಸಾಕಾಗುವುದಿಲ್ಲ. ಅವರ ಬೋಧನೆಗಳ ಮೂಲಕವೇ ಜೀವನವನ್ನು ಮುನ್ನಡೆಸಬೇಕು ಎನ್ನುವುದು ಕೈಲಾಸದ ಬಹುಮುಖ್ಯ ನಿಯಮವಾಗಿದೆ.
ಪ್ರಧಾನಿಯ ಅನುಮತಿ ಬೇಕಂತೆ!: ಈ ಮೇಲೆ ತಿಳಿಸಲಾದ ನಿಯಮಗಳ ಜೊತೆಗೆ ನಿತ್ಯಾನಂದನ ಕೈಲಾಸ ಗಣರಾಜ್ಯಕ್ಕೆ ಪಾಸ್‍ಪೋರ್ಟ್ ಹಾಗೂ ಪ್ರವೇಶವನ್ನು ಪಡೆಯಲು ಇನ್ನೂ ನಿಯಮಗಳು ಬಾಕಿಯಿದೆ. ಅವುಗಳನ್ನೆಲ್ಲ ಪಾಲಿಸಿದ ನಂತರ ಅಲ್ಲಿನ ಪ್ರಧಾನಿಯ ಅನುಮತಿ ಪಡೆದರೇ ಮಾತ್ರ ಕೈಲಾಸದ ಪ್ರವೇಶವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಪ್ರವೇಶಕ್ಕೆ ಕೈಲಾಸದ ಕ್ಯಾಬಿನೆಟ್ ಒಪ್ಪಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ.
ಕೈಲಾಸ ಯಾವ ದೇಶ ಗೊತ್ತಾ?: www.kailaasa.org ಹೆಸರಿನಲ್ಲಿ ಪ್ರತ್ಯೇಕ ವೆಬ್‍ಸೈಟ್ ಅನ್ನು ತೆರೆಯಲಾಗಿದ್ದು, ಅದರಲ್ಲಿ ಕೈಲಾಸದ ಕುರಿತು ವಿವರಿಸಲಾಗಿದೆ. ಕೈಲಾಸ ಒಂದು ರಾಜಕೀಯೇತರ ದೇಶವಾಗಿದ್ದು, ಎಲ್ಲ ಮಾನವರು ಪ್ರಬುದ್ಧರಾಗಿ ಬದುಕುವುದು ಇದರ ಗುರಿಯಾಗಿದೆ. ಅಧಿಕೃತ ಹಿಂದೂ ಧರ್ಮದ ಆಧಾರದ ಮೇಲೆ ಪ್ರಬುದ್ಧ ನಾಗರಿಕತೆ ಸಂರಕ್ಷಣೆ, ಪುನರುಜ್ಜೀವನ ನಡೆಸುವುದು ಕೈಲಾಸದ ಉದ್ದೇಶವಾಗಿದೆ ಎಂದು ಬರೆದುಕೊಂಡಿದ್ದಾರೆ.
ನಿತ್ಯಾನಂದನ ರಾಷ್ಟ್ರಕ್ಕೆ ಹಣ ಎಲ್ಲಿಂದ ಬರುತ್ತೆ? : ನಿತ್ಯಾನಂದ ತನ್ನ ದೇಶಕ್ಕಾಗಿ ಪ್ರತ್ಯೇಕ ಕರೆನ್ಸಿಯೊಂದೇ ಅಲ್ಲದೇ ಪ್ರತ್ಯೇಕ ರಿಸರ್ವ್ ಬ್ಯಾಂಕ್ ಅನ್ನು ಸೃಷ್ಟಿಸಿದ್ದಾನೆ. ಇದಕ್ಕೆ ‘ಹಿಂದೂ ರಿಸರ್ವ್ ಬ್ಯಾಂಕ್’ ಎಂದು ಹೆಸರಿಟ್ಟಿದ್ದಾನೆ. ಅಷ್ಟೇ ಅಲ್ಲದೇ ತನ್ನ ದೇಶವು ಧಾರ್ಮಿಕ ಆರ್ಥಿಕತೆಯ ಮೂಲಕ ಮುನ್ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾನೆ. ಈ ಹಿಂದೂ ರಿಸರ್ವ್ ಬ್ಯಾಂಕ್‍ಗೆ ದೇಣಿಗೆಗಳನ್ನು ನೀಡಲೆಂದೇ ವೆಬ್‍ಸೈಟ್ ಅನ್ನು ತೆರೆಯಲಾಗಿದೆ.
ಕೈಲಾಸಕ್ಕೂ ಅಮೆರಿಕಗೂ ಇದೆಯಾ ನಂಟು? : ನಿತ್ಯಾನಂದನ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸವು ಅಮೆರಿಕದ 30ಕ್ಕೂ ಹೆಚ್ಚು ನಗರಗಳ ಜೊತೆ ಸ್ನೇಹಪೂರ್ವಕವಾಗಿ ಸೇರಿರುವ ನಗರಗಳೆಂಬ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ನ್ಯೂಜೆರ್ಸಿಯ ನೆವಾರ್ಕ್ ನಗರ ನಿತ್ಯಾನಂದನ ನಕಲಿ ರಾಷ್ಟ್ರದೊಂದಿಗೆ ಸಿಸ್ಟರ್ ಸಿಟಿ ಒಪ್ಪಂದವನ್ನು ರದ್ದುಗೊಳಿಸಿದೆ. ಇದಾದ ಬಳಿಕ ಅಮೆರಿಕದ ರಿಚ್ಮಂಡ್, ವರ್ಜೀನಿಯಾ, ಡೇಟನ್, ಬಹಿಯೊ, ಬುಯೆನಾ ಪಾರ್ಕ್, ಫ್ಲೋರಿಡಾ ಮುಂತಾದ ನಗರಾಡಳಿತಗಳು ಕೈಲಾಸದೊಂದಿಗೆ ಒಪ್ಪಂದ ಮಾಡಿಕೊಂಡು ತಾವೂ ಕೈಲಾಸದ ಭಾಗವಾಗಿರುವುದಾಗಿ ಹಾಗೂ ಉಪನಗರಗಳ ಮಾದರಿಯಲ್ಲಿ ಇರುವುದಾಗಿ ಘೋಷಿಸಿಕೊಂಡಿದೆ. ಇದನ್ನೂ ಓದಿ: PublicTV Explainer: ಆಧುನಿಕ ಭಾರತದ ಮೊದಲ ಸಾಂಕ್ರಾಮಿಕ ರೋಗ ಯಾವುದು ಗೊತ್ತಾ?
ನೆವಾರ್ಕ್ ಹಾಗೂ ಕೈಲಾಸ ನಡುವಿನ ಸಿಸ್ಟರ್ ಸಿಟಿ ಒಪ್ಪಂದಕ್ಕೆ ಈ ವರ್ಷ ಜನವರಿ 12 ರಂದು ಸಹಿ ಹಾಕಲಾಗಿತ್ತು. ಈ ಒಪ್ಪಂದದ ಸಮಾರಂಭವನ್ನು ಕೂಡಾ ನೆವಾರ್ಕ್ ನ ಸಿಟಿ ಹಾಲ್‍ನಲ್ಲಿ ನಡೆಸಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಅಮೆರಿಕದ ಫಾಕ್ಸ್ ನ್ಯೂಸ್ ಸಂಸ್ಥೆ ತನಿಖಾ ವರದಿಯೊಂದನ್ನು ಸಿದ್ಧಪಡಿಸಿದ್ದು, ಅದರಲ್ಲಿ ನಿತ್ಯಾನಂದ ಎಂಬ ನಕಲಿ ಸ್ವಾಮೀಜಿ ವಾಸ್ತವದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ ಕೇವಲ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬಹುದಾದಂತಹ ದೇಶವೊಂದನ್ನು ಸೃಷ್ಟಿಸಿದ್ದಾನೆ. ಅದಕ್ಕೆ ಕೈಲಾಸ ಎಂಬ ಹೆಸರು ಕೂಡಾ ಇಟ್ಟಿದ್ದಾನೆ. ಆ ದೇಶಕ್ಕೆ ಕರೆನ್ಸಿ, ಪಾಸ್‍ಪೋರ್ಟ್, ರಾಷ್ಟ್ರ ಲಾಂಛನ ಎಲ್ಲವೂ ಇರುವುದಾಗಿ ಘೋಷಿಸಿದ್ದಾನೆ. ಇಂತಹ ನಕಲಿ ಗುರುವಿನ ಜೊತೆ ಅಮೆರಿಕದ ಈ ಮಹಾನಗರಗಳು ಒಪ್ಪಂದ ಮಾಡಿಕೊಂಡಿರುವುದು ಹಾಸ್ಯಾಸ್ಪದ, ಇದು ತನಿಖೆಗೆ ಅರ್ಹವಾದ ವಿಚಾರ ಎಂದು ತಿಳಿಸಿದೆ. ಈ ತನಿಖಾ ವರದಿ ಪ್ರಕಟಗೊಳ್ಳುತ್ತಲೇ ನ್ಯೂಜೆರ್ಸಿ ನಗರ ಕೈಲಾಸದೊಂದಿಗೆ ಮಾಡಿಕೊಂಡಿದ್ದ ಸಿಸ್ಟರ್ ಸಿಟಿ ಒಪ್ಪಂದವನ್ನು ರದ್ದುಗೊಳಿಸಿದೆ. ಇದನ್ನೂ ಓದಿ: PublicTV Explainer: ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡುವಂತಿಲ್ಲ – ಯಾಕೆ ಗೊತ್ತಾ?