ರಾಜ್ಯ ಸರ್ಕಾರ ಸುಳ್ಳು ಹೇಳ್ತಿದೆ, ಬರ ಪರಿಹಾರವನ್ನ ನ್ಯಾಯಾಲಯವೇ ತೀರ್ಮಾನಿಸಲಿ: ನಿರ್ಮಲಾ ಸೀತಾರಾಮನ್

Public TV
2 Min Read
Nirmala Sitharaman 2

– ಉಚಿತ ಗ್ಯಾರಂಟಿ ಕೊಟ್ಟು, ಮೋದಿ ಹಣ ಕೊಡ್ತಿಲ್ಲ ಅಂದ್ರೆ ಏನರ್ಥ? – ಸಚಿವರ ಪ್ರಶ್ನೆ
– ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಅಸಮಾಧಾನ

ಮೈಸೂರು: ಕೇಂದ್ರ ಸರ್ಕಾರ ಬರ ಪರಿಹಾರ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ತಿರುಗೇಟು ನೀಡಿದ್ದಾರೆ. ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ನ್ಯಾಯಾಲಯಕ್ಕೆ ನಾವು ಸಹ ಅಗತ್ಯ ದಾಖಲೆಗಳನ್ನ ಒದಗಿಸುತ್ತೇವೆ. ಬರ ಪರಿಹಾರದ ಬಗ್ಗೆ ನ್ಯಾಯಾಲಯವೇ ತೀರ್ಮಾನಿಸಲಿ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವೆ, ರಾಜ್ಯ ಸರ್ಕಾರ (Government Of Karnataka) 5,495 ಕೋಟಿ ವಿಶೇಷ ಅನುದಾನ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದ್ದೇವೆ ಅಂಥ ಸುಳ್ಳು ಹೇಳುತ್ತಿದೆ. ಹಣಕಾಸು ಆಯೋಗ ನಿಯಮದ ಪ್ರಕಾರ ಯಾವುದೇ ರಾಜ್ಯಗಳಿಗೆ ಈ ರೀತಿ ವಿಶೇಷ ಅನುದಾನ ಕೊಡಲು ಬರುವುದಿಲ್ಲ. ನೀವು ರಾಜ್ಯದಿಂದ ಆಯ್ಕೆಯಾದ ಸಂಸದರು ಹೀಗಾಗಿ ವಿಶೇಷ ಕೊಡಿಸಿ ಎನ್ನುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ತವರು ಜಿಲ್ಲೆಯನ್ನು ಗೆಲ್ಲಲು ನೇರವಾಗಿ ಅಖಾಡಕ್ಕೆ ಇಳಿದ ಸಿದ್ದರಾಮಯ್ಯ

ಮೋದಿ ಬಂದ ಮೇಲೆ ರಾಜ್ಯಕ್ಕೆ ಹೆಚ್ಚು ಹಣ:
ಒಟ್ಟು ಸಂಗ್ರಹಣೆಯಾದ ತೆರಿಗೆ ಮೊತ್ತದಲ್ಲಿ 12ನೇ ಹಣಕಾಸು ಆಯೋಗ 30.5% ಕೊಡಲು ಸೂಚನೆ ನೀಡಿತ್ತು. ಅಂದು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು, ಹೀಗಾಗಿ ಕಡಿಮೆ ಹಣ ಕೊಟ್ಟರು ರಾಜ್ಯದ ಕೈ ನಾಯಕರು ಮಾತನಾಡಲಿಲ್ಲ. 13ನೇ ಹಣಕಾಸು ಆಯೋಗ 32%, 14ನೇ ಹಣಕಾಸು ಆಯೋಗ 42% ಹಣವನ್ನ ರಾಜ್ಯಕ್ಕೆ ಕೊಡುತ್ತಿದೆ. ಯುಪಿಎ ಸರ್ಕಾರ 30% ರಷ್ಟು ಹಣ ಕೊಡುವಾಗ ಹೆಚ್ಚು ಹಣ ಕೊಡಿ ಎಂದು ತಕರಾರು ತಗೆಯಲಿಲ್ಲ. ಯುಪಿಎ ಸರ್ಕಾರಕ್ಕೆ ಹೋಲಿಕೆ ಮಾಡಿದರೆ ಮೋದಿ ರಾಜ್ಯಕ್ಕೆ ಹೆಚ್ಚು ತೆರಿಗೆ ಹಣ ನೀಡುತ್ತಿದ್ದಾರೆ. ಎಂದು ತಿರುಗೇಟು ನೀಡಿದ್ದಾರೆ.

ಮೋದಿ ಬಂದ ಮೇಲೆ ನಂಬಿಕೆ ಬಂದಿದೆ:
ಜಿಎಸ್‌ಟಿ ವಿಚಾರದಲ್ಲೂ ಎಲ್ಲವೂ ನಿರ್ಧಾರವಾಗುವುದು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ. ಆಯಾ ರಾಜ್ಯದ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. ಜಿಎಸ್‌ಟಿಯನ್ನ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆದರು. ಪ್ರಣಬ್ ಮುಖರ್ಜಿ ಸಚಿವರಾಗಿದ್ದಾಗಲೇ ಜಿಎಸ್‌ಟಿ ಜಾರಿಗೆ ತರಲು ಸಿದ್ಧತೆ ನಡೆಸಿದ್ರು ಅದು ಸಾಧ್ಯವಾಗಲಿಲ್ಲ. ಏಕಂದರೆ ಯಾವ ರಾಜ್ಯಗಳು ಅವರನ್ನ ನಂಬಿರಲಿಲ್ಲ. ಮೋದಿ ಅಧಿಕಾರಕ್ಕೆ ಬಂದ ನಂತರ ಜಿಎಸ್‌ಟಿ ಜಾರಿಗೆ ತಂದರು. ಜಿಎಸ್‌ಟಿ ಬಂದಮೇಲೆ ಸಾಕಷ್ಟು ಸಹಾಯಕವಾಗಿದೆ. ರಾಜ್ಯಕ್ಕೆ ಪ್ರತಿ ತಿಂಗಳು ಹಣ ಬರುತ್ತಿದೆ ಎಂದು ನಿರ್ಮಾಲಾ ಸೀತಾರಾಮನ್ ವಿವರಿಸಿದ್ದಾರೆ. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡ ಕಸ್ಟಡಿ ಅವಧಿ ಇಂದಿಗೆ ಅಂತ್ಯ – ಜೈಲುಪಾಲಾಗ್ತಾರಾ ರೀಲ್ಸ್ ಸ್ಟಾರ್?

ಗ್ಯಾರಂಟಿ ಕಾರ್ಯಕ್ರಮ ವಿರೋಧಿಸಲ್ಲ:
ಕೇಂದ್ರ ಸರ್ಕಾರ ಬರ ಪರಿಹಾರ ನೀಡದಿರುವ ಸಂಬಂಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಅಗತ್ಯ ದಾಖಲೆಗಳನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಗ್ಯಾರಂಟಿ ಕಾರ್ಯಕ್ರಮಗಳನ್ನು ನಾವು ವಿರೋಧಿಸುವುದಿಲ್ಲ. ಅದಕ್ಕೆ ನಮ್ಮ ಆಕ್ಷೆಪಣೆಯೂ ಇಲ್ಲ. ಆದ್ರೆ ರಾಜ್ಯ ಸರ್ಕಾರದ ಆರ್ಥಿಕತೆ ಬಹಳ ಕೆಟ್ಟದಾಗಿದೆ. ಉಚಿತ ಕಾರ್ಯಕ್ರಮಗಳನ್ನು ಘೋಷಿಸುವ ಮುನ್ನ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು. ನಾನು ಚುನಾವಣೆ ಪ್ರಚಾರಕ್ಕೆ ಬಂದಿದ್ದಾಗಲೇ ಹೇಳಿದ್ದೆ. ಇವರು ಕೊಟ್ಟಿರುವ ಗ್ಯಾರೆಂಟಿ ಯೋಜನೆಗೆ 60 ಸಾವಿರ ಕೋಟಿ ರೂ. ಹಣ ಬೇಕು ಅಂಥ. ಬಜೆಟ್‌ನಲ್ಲಿ ಹಣ ಮೀಸಲಿಡದೇ ಮೋದಿ ಸರ್ಕಾರ ಅನುದಾನ ಕೊಡುತ್ತಿಲ್ಲ ಅಂತ ಟೀಕಿಸಿದರೆ ಏನು ಅರ್ಥ? ಎಂದು ಪ್ರಶ್ನಿಸಿದ್ದಾರೆ.

Share This Article