– ರೋಶಿಣಿ ನಾಡರ್ ಮಲ್ಹೋತ್ರಾ, ಕಿರಣ್ ಮಜುಂದಾರ್ ಶಾಗೂ ಸ್ಥಾನ
ನ್ಯೂಯಾರ್ಕ್: ಫೋರ್ಬ್ಸ್ ನ ವಿಶ್ವದ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್ ನಿಯಾತಕಾಲಿಕೆಯ 2019ನೇ ಸಾಲಿನ ವಿಶ್ವದ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎಚ್‍ಸಿಎಲ್ ಕಾರ್ಪೋರೇಷನ್ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿ ರೋಶಿಣಿ ನಾಡರ್ ಮಲ್ಹೋತ್ರಾ ಹಾಗೂ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ಪಟ್ಟಿಯಲ್ಲಿ ಸೇರಿದ್ದಾರೆ.
Advertisement
Advertisement
2019ರಲ್ಲಿ ಮಹಿಳೆಯರು ಸರ್ಕಾರ, ವ್ಯಾಪಾರ, ಲೋಕೋಪಯೋಗಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ನಾಯಕತ್ವದ ಛಾಪು ಮೂಡಿಸಿದವರಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ನಿರ್ಮಲಾ ಸೀತಾರಾಮನ್ ಅವರು ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದು, 34ನೇ ಸ್ಥಾನವನ್ನು ಪಡೆದಿದ್ದಾರೆ. ಭಾರತದ ಮೊದಲ ಮಹಿಳಾ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ರಕ್ಷಣಾ ಸಚಿವೆಯಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ.
Advertisement
ಸೀತಾರಾಮನ್ ನಂತರ ಎಚ್‍ಸಿಎಲ್ ಕಾರ್ಪೋರೇಷನ್ ಸಿಇಒ ರೋಶಿಣಿ ನಾಡರ್ ಮಲ್ಹೋತ್ರಾ ಅವರು 54ನೇ ಸ್ಥಾನ ಪಡೆದಿದ್ದು, 62,998 ಕೋಟಿ ರೂ. ವ್ಯವಹಾರ ನಡೆಸುವ ತಂತ್ರಜ್ಞಾನ ಸಂಸ್ಥೆಯಲ್ಲಿ ನಿರ್ಧಾರ ಕೈಗೊಳ್ಳುವ ಪ್ರಮುಖ ಸ್ಥಾನದಲ್ಲಿ ನಾಡರ್ ಇದ್ದಾರೆ. ಅಲ್ಲದೆ ಮಲ್ಹೋತ್ರಾ ಅವರು ಕಂಪನಿಯ ಸಿಎಸ್‍ಆರ್ ಸಮಿತಿಯ ಅಧ್ಯಕ್ಷೆ ಹಾಗೂ ಶಿವ ನಾಡರ್ ಫೌಂಡೇಶನ್ ಟ್ರಸ್ಟಿಯಾಗಿದ್ದಾರೆ. ಶಿವ ನಡಾರ್ ಫೌಂಡೇಶನ್ ಭಾರತದ ಪ್ರಸಿದ್ಧ ಕಾಲೇಜುಗಳು ಹಾಗೂ ಶಾಲೆಗಳನ್ನು ನಡೆಸುತ್ತಿದೆ ಎಂದು ಫೋರ್ಬ್ಸ್ ನಲ್ಲಿ ತಿಳಿಸಲಾಗಿದೆ.
Advertisement
ಕಿರಣ್ ಮಂಜೂದಾರ್ ಶಾ ಅವರು 65ನೇ ಸ್ಥಾನ ಪಡೆದಿದ್ದು, ಭಾರತ ಶ್ರೀಮಂತ ಮಹಿಳೆ ಹಾಗೂ 1978ರಲ್ಲಿ ದೇಶದ ಅತಿ ದೊಡ್ಡ ಸ್ವ-ನಿರ್ಮಿತ ಜೈವಿಕ ಔಷಧೀಯ ಸಂಸ್ಥೆ ಬಯೋಕಾನ್ ಸಂಸ್ಥಾಪಕಿಯಾಗಿದ್ದಾರೆ.
ಬಯೋಕಾನ್ ಯುಎಸ್ ಬಯೋಸಿಮಿಲರ್ಸ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಲಾಭದಾಯಕ ಸಂಸ್ಥೆಯಾಗಿ ಬೆಳೆದಿದೆ. ಈ ಮೂಲಕ ಹೂಡಿಕೆದಾರರ ಗಮನ ಸೆಳೆದಿದೆ. ಕೆಲವು ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಬಳಸುವ ಎರಡು ವಿಭಿನ್ನ ಬಯೋಸಿಮಿಲರ್‍ಗಳ ಔಷಧಿಗಳಿಗೆ ಯುಎಸ್‍ಎಫ್‍ಡಿಎಯಿಂದ ಅನುಮೋದನೆ ಪಡೆದ ಮೊದಲ ಕಂಪನಿಯಾಗಿದೆ.
ಫೋರ್ಬ್ಸ್ ಪಟ್ಟಿಯ ಮೊದಲ ಸ್ಥಾನದಲ್ಲಿ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್, ಯೂರೋಪಿಯನ್ ಸೆಂಟ್ರಲ್ ಬ್ಯಾಂಕಿನ ಅಧ್ಯಕ್ಷೆ ಕ್ರಿಸ್ಟಿನ್ ಲಗಾರ್ಡೆ ದ್ವಿತೀಯ, ಯುಎಸ್ ಹೌಸ್ ರೆಪ್ರೆಸೆಂಟೆಟಿವ್ ನ್ಯಾನ್ಸಿ ಪೆಲೋಸಿ ತೃತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೆ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು 29ನೇ ಸ್ಥಾನ ಪಡೆದಿದ್ದಾರೆ.