Connect with us

Latest

ಸೋನಿಯಾ ಸಾರ್ವಜನಿಕರ ದಾರಿ ತಪ್ಪಿಸ್ತಿದ್ದಾರೆ- ನಿರ್ಮಲಾ ಸೀತಾರಾಮನ್

Published

on

ನವದೆಹಲಿ: ಪೌರತ್ವ ಕಾಯ್ದೆ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.

ಪೌರತ್ವ ಕಾಯ್ದೆ ಕುರಿತು ದೇಶಾದ್ಯಂತ ನಡೆಯುತ್ತಿರುವ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಪೌರತ್ವ ಕಾಯ್ದೆಯನ್ನು ಎನ್‍ಆರ್‍ಸಿಯೊಂದಿಗೆ ಹೊಂದಿಕೆ ಮಾಡಿ ಸೋನಿಯಾ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಆದರೆ ಇದನ್ನು ಇನ್ನೂ ರೂಪಿಸಿಲ್ಲ ಎಂದು ಕಿಡಿ ಕಾರಿದ್ದಾರೆ.

ಪ್ರತಿಭಟನಾಕಾರರು ಕಾನೂನನ್ನು ಸಂಪೂರ್ಣವಾಗಿ ಓದಿಕೊಂಡು ಈ ಕುರಿತು ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು. ಈ ಮೂಲಕ ಪ್ರತಿಭಟನೆಯಿಂದ ದೂರ ಉಳಿಯಬೇಕು. ದಾರಿ ತಪ್ಪಿಸಿ, ಹಿಂಸಾಚಾರಕ್ಕೆ ಬಳಸಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಕುರಿತು ಸಾರ್ವಜನಿಕರು ಗೊಂದಲಕ್ಕೊಳಗಾಗಬೇಕಿಲ್ಲ ಹಾಗೂ ಭಯ ಪಡಬೇಕಿಲ್ಲ. ಕಾಂಗ್ರೆಸ್, ಟಿಎಂಸಿ, ಎಎಪಿ ಹಾಗೂ ಇತರೆ ಪಕ್ಷಗಳು ಪೌರತ್ವ ಕಾಯ್ದೆಯನ್ನು ಎನ್‍ಆರ್‍ಸಿಗೆ ಹೊಂದಾಣಿಕೆ ಮಾಡಿ ಗೊಂದಲ ಸೃಷ್ಟಿಸುತ್ತಿವೆ. ಆದರೆ ಎನ್‍ಆರ್‍ಸಿಯನ್ನು ಇನ್ನೂ ರೂಪಿಸಲಾಗಿಲ್ಲ ಎಂದು ಸೀತಾರಾಮನ್ ಸ್ಪಷ್ಟಪಡಿಸಿದರು.

ಈ ಕಾಯ್ದೆಯು ಯಾವುದೇ ಭಾರತೀಯರಿಗೆ ಪೌರತ್ವ ನೀಡಲು ನಿರಾಕರಿಸುವುದಿಲ್ಲ. ಅಲ್ಲದೆ ಯಾವುದೇ ಭಾರತೀಯ ನಾಗರಿಕರಿಗೆ ಇದು ಅನ್ವಯವಾಗುವುದಿಲ್ಲ. ಆದರೆ ದುರದೃಷ್ಟಕರ ಎಂಬಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈ ಕುರಿತು ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಸಿಎಎ ವಿದೇಶದಲ್ಲಿ ಕಿರುಕುಳ ಅನುಭವಿಸುತ್ತಿರುವವರಿಗೆ ಪೌರತ್ವ ನೀಡುವುದಾಗಿದೆ. ಇದಕ್ಕಾಗಿ ನಾವು 70 ವರ್ಷಗಳ ಕಾಲ ಕಾಯಬೇಕಾಯಿತು ಎಂದು ತಿಳಿಸಿದ್ದಾರೆ.

ದೇಶದ ಬಹುತೇಕ ಕಡೆಗಳಲ್ಲಿ ಪೌರತ್ವ ಕಿಚ್ಚು ಹೆಚ್ಚಾಗಿದ್ದು, ಉತ್ತರ ಭಾರತ ಪೌರತ್ವ ಕಾಯ್ದೆ ವಿರೋಧಿ ಕಿಚ್ಚಿನಲ್ಲಿ ಬೇಯುತ್ತಿದೆ. ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಹಿಂಸಾಚಾರ ತಹಬದಿಗೆ ಬರುತ್ತಿಲ್ಲ. ರಾಜ್ಯದ ಮಂಗಳೂರಿನಲ್ಲಿಯೂ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಗೋಲಿಬಾರ್ ಗೆ ಒಳಗಾಗಿ ಇಬ್ಬರು ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಗರದಿಂದ ನಗರಕ್ಕೆ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರ ತವರು ಗೋರಖ್‍ಪುರ್, ಬುಲಂದ್ ಶಹರ್, ಫಿರೋಜಾಬಾದ್, ಭೈರುಚ್, ಕಾನ್ಪುರ್, ಮೀರಟ್, ಹಾಪುರ್ ಧಗಧಗಿಸಿವೆ. ಫಿರೋಜಾಬಾದ್‍ನಲ್ಲಿ ಗೋಲಿಬಾರ್ ನಡೆದು ಒಬ್ಬರು ಬಲಿ ಆಗಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದಿವೆ.

ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿದರೆ, ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿ, ಲಾಠಿ ಚಾರ್ಜ್ ಮಾಡಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಲೇ ಇಲ್ಲ. ಗೋರಖ್‍ಪುರದಲ್ಲಿ ಪ್ರತಿಭಟನಾಕಾರರನ್ನು ಸಿಕ್ಕಸಿಕ್ಕಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆ. ಎಲ್ಲಾ ಕಡೆ ಪೊಲೀಸ್ ವಾಹನಗಳು ಮತ್ತು ರಸ್ತೆ ಬದಿ ನಿಲ್ಲಿಸಲಾಗಿದ್ದ ವಾಹನಗಳು ಧಗಧಗಿಸಿವೆ.

ಕಾನ್ಪುರದಲ್ಲಿ ಗುಂಡೇಟು ತಗಲಿರುವ 8 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಆದರೂ ಪ್ರತಿಭಟನೆ, ಹಿಂಸೆ ಮಾತ್ರ ವಿಪರೀತ ವೇಗದಲ್ಲಿ ಹರಡುತ್ತಿದೆ. ಆದರೆ ಈಶಾನ್ಯದಲ್ಲಿ ಪ್ರತಿಭಟನೆಗಳು ನಿಯಂತ್ರಣಕ್ಕೆ ಬರುತ್ತಿವೆ. ಹೀಗಾಗಿ ಅಸ್ಸಾಂನಲ್ಲಿ ಇಂಟರ್‍ನೆಟ್ ಸೇವೆ ಮತ್ತೆ ಆರಂಭಿಸಲಾಗಿದೆ.

Click to comment

Leave a Reply

Your email address will not be published. Required fields are marked *