ನವದೆಹಲಿ: ಪಶುವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಎನ್‍ಕೌಂಟರ್ ಕುರಿತು ಪ್ರತಿಕ್ರಿಯೆ ನೀಡಿರುವ ನಿರ್ಭಯಾರ ತಾಯಿ ಆಶಾ ದೇವಿ ಸಂತಸ ವ್ಯಕ್ತಪಡಿಸಿದ್ದು, ಪೊಲೀಸರ ಕಾರ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ.
ಆರೋಪಿಗಳ ಎನ್‍ಕೌಂಟರ್ ಕುರಿತಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಆಶಾ ದೇವಿ ಅವರು, ಆರೋಪಿಗಳಿಗೆ ನೀಡಿರುವ ಶಿಕ್ಷೆ ನನಗೆ ಸಂತಸ ತಂದಿದೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಬೇಕಿದೆ. ಪ್ರಕರಣದಲ್ಲಿ ಪೊಲೀಸರ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಬೇಡಿಕೆ ಇಡುತ್ತೇನೆ ಎಂದರು.
ಕಳೆದ 7 ವರ್ಷಗಳಿಂದ ನಾನು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದು, ಪ್ರತಿದಿನವೂ ಸಾಯುತ್ತಿದ್ದೇವೆ. ನಾನು ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದು, ಶೀಘ್ರವೇ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕು ಎಂದು ಆಗ್ರಹಿಸಿದ್ದಾರೆ.
2012ರ ಡಿಸೆಂಬರ್ ನಲ್ಲಿ ನಡೆದ ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅತ್ಯಾಚಾರಿಗಳ ವಿರುದ್ಧ ಸಾರ್ವಜನಿಕರು ಹೋರಾಟ, ಪ್ರತಿಭಟನೆಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತನ್ನಿ ಎಂಬ ಕೂಗು ಕೇಳಿಬಂದಿತ್ತು. ಇದನ್ನು ಓದಿ: ಶೀಘ್ರದಲ್ಲೇ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ
ಇಂದು ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ. ಕರ್ನಾಟಕದ ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್ ನೇತೃತ್ವದಲ್ಲಿ ಈ ಎನ್‍ಕೌಂಟರ್ ನಡೆದಿದೆ. ಇದನ್ನು ಓದಿ: ದೇಶಕ್ಕಾಗಿ ಒಳ್ಳೆಯ ನಿರ್ಧಾರ- ವಿಶ್ವನಾಥ್ ಕೆಲಸಕ್ಕೆ ಸಹೋದರ ಶ್ಲಾಘನೆ