ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿ ರಾಜರೋಷವಾಗಿ ಓಡಾಡುತ್ತಿದ್ದಾರೆ.
ಲಂಡನ್ ನಗರದಲ್ಲಿ ಓಡಾಡುತ್ತಿರುವ ನೀರವ್ ಮೋದಿ ಬಗ್ಗೆ ಟೆಲಿಗ್ರಾಫ್ ವರದಿ ಮಾಡಿದೆ. ಪತ್ರಕರ್ತರು ಕೇಳಿದ ಎಲ್ಲ ಪ್ರಶ್ನೆಗಳಿಗೆ “ನೋ ಕಮೆಂಟ್ಸ್” ಎಂದು ಉತ್ತರಿಸಿದ್ದಾರೆ. 13 ಸಾವಿರ ಕೋಟಿ ರೂ. ವಂಚನೆಗೈದ ಆರೋಪಿ ನೀರವ್ ಮೋದಿಗೆ ಇನ್ನು ಎಷ್ಟು ದಿನ ಲಂಡನ್ ನಲ್ಲಿ ಇರಲಿದ್ದೀರಿ ಎನ್ನುವ ಪ್ರಶ್ನೆಗೆ ಅವರಿಂದ ಯಾವುದೇ ಉತ್ತರ ಬರಲಿಲ್ಲ.
48 ವರ್ಷದ ನೀರವ್ ಮೋದಿ ಲಂಡನ್ ನಗರದಲ್ಲಿ ಹೋದ ಎಲ್ಲ ಕಡೆ ಪತ್ರಕರ್ತರು ಅವರನ್ನು ಹಿಂಬಾಲಿಸಿದ್ದಾರೆ. ಆದರೆ ಯಾವುದೇ ಪ್ರಶ್ನೆಗೆ ಉತ್ತರಿಸಲಿಲ್ಲ. ಕೊನೆಗೆ ನೀರವ್ ಮೋದಿ ಟ್ಯಾಕ್ಸಿ ಮಾಡಿ ಹೊರಟು ಹೋಗಿರುವ ದೃಶ್ಯ ಸೆರೆಯಾಗಿದೆ.
Exclusive: Telegraph journalists tracked down Nirav Modi, the billionaire diamond tycoon who is a suspect for the biggest banking fraud in India's historyhttps://t.co/PpsjGeFEsy pic.twitter.com/v3dN5NotzQ
— The Telegraph (@Telegraph) March 8, 2019
ನೀರವ್ ಮೋದಿ ಪಶ್ಚಿಮ ಲಂಡನ್ ನಲ್ಲಿರುವ ಸೊಹೊ ಪ್ರದೇಶದಲ್ಲಿ ಹೊಸ ವಜ್ರದ ವ್ಯಾಪಾರ ಆರಂಭಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಪ್ರಶ್ನೆ ಕೇಳುವಾಗ ನೀರವ್ ಮೋದಿ ಕಪ್ಪು ಬಣ್ಣದ ಆಸ್ಟ್ರೀಚ್ ಕಂಪನಿಯ ಜಾಕೆಟ್ ಧರಿಸಿದ್ದಾರೆ. ಸಾಧಾರಣವಾಗಿ ಆಸ್ಟ್ರೀಚ್ ಕಂಪನಿಯ ಈ ಜಾಕೆಟ್ ಬೆಲೆ 10 ಸಾವಿರ ಡಾಲರ್(6.99 ಲಕ್ಷ ರೂ.)ನಿಂದ ಆರಂಭವಾಗುತ್ತದೆ.
ಜೀವಕ್ಕೆ ಅಪಾಯವಿದೆ:
ಭಾರತಕ್ಕೆ ಬಂದರೆ ನನ್ನ ಕಕ್ಷಿದಾರರ ಜೀವಕ್ಕೆ ಅಪಾಯವಿದೆ ಎಂದು ವಜ್ರ ವ್ಯಾಪಾರಿ ನೀರವ್ ಮೋದಿ ವಕೀಲರು ಈ ಹಿಂದೆ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದರು. ಒಂದು ವೇಳೆ ನಾನು ಭಾರತಕ್ಕೆ ಬಂದರೆ ಜೀವಕ್ಕೆ ಅಪಾಯವಿದೆ. ಕೊಲೆ ಬೆದರಿಕೆ ಕೇಳಿಬಂದಿದೆ. ಇದರಿಂದಾಗಿ ನಾನು ಭಾರತಕ್ಕೆ ಬರುವುದಿಲ್ಲ ಅಂತಾ ನೀರವ್ ಮೋದಿ ತಿಳಿಸಿದ್ದಾರೆ ಎಂದು ವಕೀಲ ಇಡಿ ಅಧಿಕಾರಿಗಳಿಗೆ ತಿಳಿಸಿದ್ದರು.
ಇಡಿ ಅಧಿಕಾರಿಗಳು ನೀರವ್ ಕಂಪನಿ, ಆಸ್ತಿಯನ್ನು ವಶಕ್ಕೆ ಪಡೆದಿದ್ದರಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಅಷ್ಟೇ ಅಲ್ಲದೇ ನೀರವ್ ಬಾಡಿಗೆ ಪಡೆದಿದ್ದ ಜಾಗದ ಮಾಲೀಕರಿಗೆ ಹಣ ಪಾವತಿಸಿಲ್ಲ, ವಜ್ರಾಭರಣಕ್ಕಾಗಿ ಮುಂಗಡ ಹಣ ನೀಡಿದ್ದವರು ತಮ್ಮ ಹಣವನ್ನು ಮರಳಿಸುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಪ್ರಾಣ ಬೆದರಿಕೆ ಇರುವ ಕಾರಣ ನೀರವ್ ಮೋದಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ವಕೀಲರು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಒಂದೇ ಸೆಕೆಂಡಿನಲ್ಲಿ ನೀರವ್ ಮೋದಿಯ 100 ಕೋಟಿ ರೂ. ಮೌಲ್ಯದ ಮನೆ ಧ್ವಂಸ ವಿಡಿಯೋ ನೋಡಿ
ಏನಿದು ಪ್ರಕರಣ?:
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಪರಾರಿಯಾಗಿದ್ದಾರೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯಕ್ಕೆ ಮುಟ್ಟುಗೋಲು ಹಾಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv