ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಬಂಧನದ ಭೀತಿಯಿಂದ ಪಾರಾಗಲು ಕೆರಿಬಿಯನ್ ಸೇಂಟ್ ಕಿಟ್ಸ್ ಮತ್ತು ನೇವಿಸ್ ದ್ವೀಪ ರಾಷ್ಟ್ರಗಳ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
11,400 ಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ವಜ್ರಾಭರಣಗಳ ಉದ್ಯಮಿಯಾಗಿರುವ ನೀರವ್ ಕುಟುಂಬ ಪ್ರಕರಣ ಬೆಳಕಿಗೆ ಬರುವ ಮುನ್ನವೇ ದೇಶ ತೊರೆದು ಅಮೆರಿಕಕ್ಕೆ ಹಾರಿತ್ತು. ಈಗ ಭಾರತದ ವಿದೇಶಾಂಗ ಸಚಿವಾಲಯ ಅವರನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿರುವಾಗ ನೀರವ್ ಮೋದಿ ಕುಟುಂಬ ಸೇಂಟ್ ಕೀಟ್ಸ್ ಮತ್ತು ನೇವಿಸ್ ದ್ವೀಪದಲ್ಲಿ ಆಶ್ರಯ ಪಡೆಯಲು ಮುಂದಾಗಿದೆ.
Advertisement
Advertisement
ವಿದೇಶಾಂಗ ಸಚಿವಾಲಯ ಶನಿವಾರ ನೀರವ್ ಹಾಗೂ ಅವರ ಕುಟುಂಬ ಸದಸ್ಯರ ಪಾಸ್‍ಪೋರ್ಟ್ ರದ್ದು ಮಾಡಿತ್ತು. ಅಷ್ಟೇ ಅಲ್ಲದೇ ಅಮೆರಿಕದೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧ ಈಗ ಮತ್ತಷ್ಟು ಉತ್ತಮಗೊಂಡಿರುವ ಕಾರಣ ಅಮೆರಿಕ ಸರ್ಕಾರ ಯಾವ ಸಮಯದಲ್ಲಿ ಆದರೂ ನಮ್ಮನ್ನು ಭಾರತದ ವಶಕ್ಕೆ ನೀಡಬಹುದು ಎನ್ನುವ ಭೀತಿಯಿಂದ ನೀರವ್ ಕೆರೆಬಿಯನ್ ದ್ವೀಪ ರಾಷ್ಟ್ರಗಳ ಪೌರತ್ವ ಪಡೆಯಲು ಪ್ರಯತ್ನಿಸಿದ್ದಾರೆ.
Advertisement
ನೀರವ್ ಕುಟುಂಬ ಈಗಾಗಲೇ ಅಮೆರಿಕದ ನ್ಯೂಯಾರ್ಕ್‍ನಿಂದ ಸೇಂಟ್ಸ್ ಕಿಟ್ಸ್ ಮತ್ತು ನೇವಿಸ್ ಐಲ್ಯಾಂಡ್‍ಗೆ ವಾಸಸ್ಥಳ ಬದಲಿಸಿ ಅಲ್ಲಿ ಐಷಾರಾಮಿ ಬಂಗಲೆಯನ್ನೂ ಖರೀದಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
ಪೌರತ್ವ ಪಡೆಯುವುದು ಹೇಗೆ?
ಕೆರಿಬಿಯನ್ ದ್ವೀಪ ರಾಷ್ಟಗಳ ಪೌರತ್ವ ಪಡೆಯುವುದು ಅತ್ಯಂತ ಸರಳ ಪ್ರಕ್ರಿಯೆಯಾಗಿದೆ. ಈ ರಾಷ್ಟ್ರಗಳ ಪೌರತ್ವ ಪಡೆಯಲು ಅಲ್ಲಿನ ಶುಗರ್ ಇಂಡಸ್ಟ್ರಿ ಡೈವರ್ಸಿಫಿಕೇಷನ್ ಫೌಂಡೇಶನ್‍ಗೆ 1.6 ಕೋಟಿ ರೂ. ದೇಣಿಗೆ ಅಥವಾ ಪೂರ್ವ ನಿಗದಿತ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ 2.8 ಕೋಟಿ ರೂ. ಹಣ ಹೂಡಿಕೆ ಮಾಡಿದರೆ ಆ ದೇಶದ ಪೌರತ್ವ ಪಡೆಯಬಹುದು.
ದ್ವೀಪ ರಾಷ್ಟ್ರದ ಪೌರತ್ವವೇ ಏಕೆ?
ಭಾರತೀಯ ನಾಗರಿಕರಿಗೆ ಈ ರಾಷ್ಟ್ರದಲ್ಲಿ ಉಳಿದುಕೊಳ್ಳಲು 30 ದಿನಗಳ ವರೆಗೆ ಯಾವುದೇ ಪ್ರವಾಸಿ ವೀಸಾದ ಅಗತ್ಯವಿಲ್ಲ. ಈ ಎಲ್ಲಾ ನಿಯಮಗಳನ್ನು ಚೆನ್ನಾಗಿ ತಿಳಿದಿರುವ ನೀರವ್ ಪ್ರಸ್ತುತ ಸೇಂಟ್ ಕಿಟ್ಸ್ ಮತ್ತು ನೇವಿಸ್ ದ್ವೀಪ ರಾಷ್ಟ್ರಗಳ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ ಈ ದ್ವೀಪ ರಾಷ್ಟ್ರ ಕೇವಲ 50 ಸಾವಿರ ಜನಸಂಖ್ಯೆ ಮಾತ್ರ ಹೊಂದಿದ್ದು, ಈ ರಾಷ್ಟ್ರಗಳ ಜೊತೆಗೆ ಭಾರತ ಯಾವುದೇ ಒಪ್ಪಂದ ಇದುವರೆಗೂ ಮಾಡಿಕೊಂಡಿಲ್ಲ. ಈ ಕಾರಣಗಳಿಂದ ಇದು ಸುರಕ್ಷಿತ ಸ್ಥಳವಾಗಿರುವ ಹಿನ್ನೆಲೆಯಲ್ಲಿ ನೀರವ್ ಕುಟುಂಬ ಇಲ್ಲಿಗೆ ವಾಸಸ್ಥಳ ಬದಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಿಯಮಗಳು ಏನು ಹೇಳುತ್ತೆ?
ಕಾಮನ್‍ವೆಲ್ತ್ ಮತ್ತು ಸ್ನೇಹ ರಾಷ್ಟ್ರದ ಭಾಗವಾಗಿ ಸೇಂಟ್ ಕಿಟ್ಸ್ ಮತ್ತು ನೇವಿಸ್ ದ್ವೀಪ ಭಾರತದ ಜತೆ ಹಸ್ತಾಂತರ ಒಪ್ಪಂದ ಮಾಡಿಕೊಂಡಿಲ್ಲ. ಒಂದು ವೇಳೆ ಈ ದೇಶದ ಪೌರತ್ವ ಪಡೆದರೆ ನೀರವ್ ಅಲ್ಲಿಂದಲೇ ಸಿಂಗಾಪುರ ಮತ್ತು ಹಾಂಕಾಂಗ್‍ನಲ್ಲಿ ವಜ್ರಾಭರಣಗಳ ವಹಿವಾಟನ್ನು ಮತ್ತೆ ಆರಂಭಿಸಬಹುದಾಗಿದೆ. ಅಲ್ಲದೇ ಈ ದ್ವೀಪ ರಾಷ್ಟ್ರಗಳ ಹಕ್ಕನ್ನು ಪಡೆದಿರುವವರನ್ನ ಭಾರತಕ್ಕೆ ಹಸ್ತಾಂತರ ಮಾಡುವ ಹಕ್ಕನ್ನು ಸಿಂಗಾಪುರ ಹಾಗೂ ಹಾಂಕಾಂಗ್ ಹೊಂದಿಲ್ಲ. ಹೀಗಾಗಿ ಈ ದ್ವೀಪ ಸದ್ಯಕ್ಕೆ ಸುರಕ್ಷಿತ ತಾಣವೆನಿಸಿದೆ. ಇದನ್ನೂ ಓದಿ: ನೀರವ್ ಮೋದಿಗೆ ಸೇರಿದ 10,000ಕ್ಕೂ ಹೆಚ್ಚು ವಾಚ್‍ಗಳನ್ನ ಜಪ್ತಿ ಮಾಡಿದ ಇಡಿ
ಜತಿನ್ ಮೆಹ್ತಾ ವರ್ಶನ್ 2:
ಎಂಟು ವರ್ಷಗಳ ಹಿಂದೆ ಉದ್ಯಮಿ ಜತಿನ್ ಮೆಹ್ತಾ ಮಾಲೀಕತ್ವದ ವಿನ್‍ಸಮ್ ಡೈಮಂಡ್ಸ್ ಅಂಡ್ ಜ್ಯುವೆಲ್ಲರಿ ಕಂಪನಿ ಎಸ್‍ಬಿಐ ಹಾಗೂ ಬ್ಯಾಂಕ್ ಆಫ್ ಬರೋಡಾಗೆ ವಂಚನೆ ಮಾಡಿತ್ತು. ಸುಮಾರು 4,686 ಕೋಟಿ ರೂ. ವಂಚಿಸಿದ್ದ ಜತಿನ್ ಮೆಹ್ತಾ 2013 ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದರು. ಅವರು ಸಹ ಸೇಂಟ್ ಕಿಟ್ಸ್ ಮತ್ತು ನೇವಿಸ್ ರಾಷ್ಟ್ರದ ಪೌರತ್ವ ಪಡೆದು ರಕ್ಷಣೆ ಪಡೆದಿದ್ದರು. ಸರ್ಕಾರ ಈ ಪ್ರಕರಣದಲ್ಲಿ ಆರೋಪಿಗಳ ಹಸ್ತಾಂತರಕ್ಕೆ ಸತತ ಪ್ರಯತ್ನ ನಡೆಸುತ್ತಿದ್ದರೂ ಇದುವರೆಗೆ ಅವರನ್ನು ಭಾರತದ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ.
ಸೂರತ್‍ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಉದ್ಯಮಿ ಜತಿನ್ ಮೆಹ್ತಾ ಗೆ ಸಂಬಂಧಿಸಿದ ಆಸ್ತಿಯನ್ನು ವಶಕ್ಕೆ ಪಡೆದ ನಂತರ ಕೇವಲ 120 ಕೋಟಿ ರೂ. ಹಣವನ್ನಷ್ಟೇ ಪಡೆಯಲು ಸಾಧ್ಯವಾಯಿತು. ಪ್ರಸ್ತುತ ನೀರವ್ ಮೋದಿ ಸಹ ಇದೇ ಹಾದಿಯನ್ನು ತುಳಿದಿದ್ದು, ಒಂದು ವೇಳೆ ಕೆರಿಬಿಯನ್ ದ್ವೀಪ ರಾಷ್ಟ್ರಗಳ ಪೌರತ್ವ ಪಡೆದರೆ ಮತ್ತೆ ಭಾರತಕ್ಕೆ ಕರೆತರುವುದು ಕಷ್ಟ ಸಾಧ್ಯವಾಗಲಿದೆ. ಇದನ್ನೂ ಓದಿ: ನೀರವ್ ಮೋದಿಗೆ ಬೈ ಬೈ ಹೇಳಿದ ಪ್ರಿಯಾಂಕಾ ಚೋಪ್ರಾ