ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಟ ನಿಖಿಲ್ ವಿವಾಹದ ಸಿದ್ಧತಾ ಕಾರ್ಯಕ್ಕೆ ರಾಮನಗರ ಹೊರವಲಯದ ಜಾನಪದ ಲೋಕದ ಬಳಿಯ ಜಮೀನಿನಲ್ಲಿ ವಿಶೇಷ ಭೂಮಿ ಪೂಜೆ, ಹೋಮ- ಹವನ ನಡೆಸುವ ಮೂಲಕ ಚಾಲನೆ ನೀಡಲಾಯಿತು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ-ಅನಿತಾ ದಂಪತಿ ಮತ್ತು ರೇವತಿ ಪೋಷಕರಾದ ಮಂಜುನಾಥ್ ಮತ್ತು ಶ್ರೀದೇವಿ ವಿಶೇಷ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಖ್ಯಾತ ಜ್ಯೋತಿಷಿ ಹರಿಶಾಸ್ತ್ರಿ ಗುರೂಜಿ ಹಾಗೂ ರಾಮನಗರದ ಬಲಮುರಿ ಗಣಪತಿ ದೇಗುಲದ ಗಣೇಶ ಭಟ್ ನೇತೃತ್ವದಲ್ಲಿ ಹೋಮ- ಹವನ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಿದವು.
Advertisement
Advertisement
ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ, ಏಪ್ರಿಲ್ 17ರಂದು ವಿವಾಹ ನಿಶ್ಚಯ ಆಗಿದೆ. ಅದಕ್ಕೆ ಬೇಕಾದ ಸಿದ್ಧತೆಗಳಿಗೆ ಇಂದು ಪೂಜೆ ಮೂಲಕ ಚಾಲನೆ ನೀಡುತ್ತಿದ್ದೇವೆ. ಗಣ ಹೋಮ ಜೊತೆಗೆ ಭೂಮಿಪೂಜೆ ನಡೆದಿದೆ. ಇದು ನನ್ನ ಕುಟುಂಬದ ಮೊದಲ ಹಾಗೂ ಕೊನೆಯ ಶುಭ ಸಮಾರಂಭ. ನನ್ನೆಲ್ಲ ಕಾರ್ಯಕರ್ತರು ಸೇರಿ ಪ್ರತಿ ಕುಟುಂಬಕ್ಕೆ ಆಹ್ವಾನ ನೀಡುತ್ತೇನೆ. ಮದುವೆ ಹೆಸರಿನಲ್ಲಿ ನನ್ನೆಲ್ಲ ಮತದಾರರಿಗೆ ಧನ್ಯವಾದ ಹೇಳಲಿದ್ದೇನೆ. ಸಪ್ತಪದಿ ಮಂಟಪ ಸೇರಿದಂತೆ ಹಲವು ವೇದಿಕೆ ಇಲ್ಲಿ ನಿರ್ಮಾಣ ಆಗಲಿದೆ ಎಂದು ತಿಳಿಸಿದ್ರು.
Advertisement
Advertisement
ನನ್ನ ಹುಟ್ಟೂರಾದ ಹೊಳೆ ನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ನಿಖಿಲ್ ಮದುವೆ ಮಾಡಬೇಕು ಎಂಬ ಆಲೋಚನೆ ಮೊದಲು ಇತ್ತು. ಆದರೆ ನನಗೆ ರಾಜಕೀಯ ಜನ್ಮ ನೀಡಿದ ರಾಮನಗರವನ್ನ ಜನ ತಮ್ಮ ಮೇಲೆ ಹೊರೆಸಿರುವ ಋಣದ ಭಾರವನ್ನ ಇಳಿಸಿಕೊಳ್ಳುವುದು ಹಾಗೂ ಜಿಲ್ಲೆಯ ಜನರಿಗೆ ಅಭಿಮಾನಿಗಳಿಗೆ ಊಟ ಹಾಕಿಸುವ ಸಲುವಾಗಿ ಈ ಜಾಗ ಆಯ್ಕೆ ಮಾಡಿದ್ದೇನೆ. ನನ್ನ ಹೃದಯದಲ್ಲಿ ಇರುವುದು ಇಲ್ಲಿನ ಜನ ಎಂದರು.
ನಿಖಿಲ್- ರೇವತಿ ಮದುವೆಗೆ ಅದ್ಧೂರಿ ಸೆಟ್ ಹಾಕುವುದಿಲ್ಲ. ಸಪ್ತಪದಿ ಮಂಟಪ ನಿರ್ಮಾಣವಾಗುತ್ತೆ. ಆದರೆ ನನ್ನೆಲ್ಲ ಲಕ್ಷಾಂತರ ಕಾರ್ಯಕರ್ತರು, ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ದೊಡ್ಡ ಮಟ್ಟದ ಕಾರ್ಯಕ್ರಮವೇ ಆಗಿರಲಿದೆ. ಮುಹೂರ್ತದ ಕಾರ್ಯಕ್ರಮ ಇಲ್ಲಿ ನಡೆಯಲಿದೆ.
ಆರತಕ್ಷತೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಮಾಡಬೇಕು ಎಂಬುದು ಹಲವರ ಅಭಿಪ್ರಾಯ. ಈ ಬಗ್ಗೆ ಇನ್ನೆರಡು ದಿನದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಒಟ್ಟು 90ರಿಂದ 95 ಎಕರೆ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಹಿತಿ ನೀಡಿದರು.