ರಾಮನಗರ: ವಿಧಾನಸಭಾ ಚುನಾವಣೆ ಸಮೀಪದ ಹಿನ್ನೆಲೆ ಚನ್ನಪಟ್ಟಣ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಜೆಡಿಎಸ್ (JDS) ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಹಾಗೂ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara) ನಡುವಿನ ವಾಕ್ಸಮರ ತಾರಕಕ್ಕೇರಿದೆ. ಅಂಬಾರಿಯನ್ನು ಆನೆ ಹೊರೋದು, ಮರಿಯಾನೆ ಹೊರಲ್ಲ ಎಂದಿದ್ದ ಸಿ.ಪಿ ಯೋಗೇಶ್ವರ್‌ಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಆನೆ ಆಮೇಲೆ, ಮೊದಲು ಮರಿಯಾನೆಯನ್ನು ಜೀರ್ಣಿಸಿಕೊಳ್ಳಲಿ. ಇನ್ನು 6 ತಿಂಗಳು ಕಾದರೆ ಸಿ.ಪಿ ಯೋಗೀಶ್ವರ್ ಮಾಜಿ ಶಾಸಕರಾಗಿಯೇ ಉಳಿಯಲಿದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement
ನಗರದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಮನಗರ ಜಿಲ್ಲೆಯನ್ನಾಗಿ ಮಾಡಿದ್ದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ನಮ್ಮ ಜನರ ಸಂಕಷ್ಟ ಕೇಳುವುದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ರಾಮನಗರ ಜಿಲ್ಲೆಯ ಜನರ ಜೊತೆಗೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಇಲ್ಲಿನ ಜನರ ಕಷ್ಟಸುಖದಲ್ಲಿ ನಾನು ಭಾಗಿಯಾಗುವೆ ಎಂದು ನಿಖಿಲ್ ಹೇಳಿದರು. ಇದನ್ನೂ ಓದಿ: ಸರ್ಕಾರಿ ನೌಕರರರಿಗೆ ಸಿಹಿ ಸುದ್ದಿ – 7ನೇ ವೇತನ ಆಯೋಗ ಜಾರಿ
Advertisement
ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಹೋಗಬಹುದು. ಚನ್ನಪಟ್ಟಣ ನಮ್ಮ ತಂದೆ ಪ್ರತಿನಿಧಿಸುವ ಕ್ಷೇತ್ರ. ನನಗೆ ನನ್ನ ಇತಿಮಿತಿಯ ಅರಿವು ಇದೆ. ಜೆಡಿಎಸ್ ಯುವ ಘಟಕದ ಜವಾಬ್ದಾರಿ ನನ್ನ ಮೇಲಿದೆ. ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಕೊಟ್ಟಿದ್ದಾರೆ. ಜೊತೆಗೆ ಪಂಚರತ್ನ ಹೆಚ್.ಡಿ ಕುಮಾರಸ್ವಾಮಿ ಅವರ ಜನಪರ ಯೋಜನೆ. ರಾಜ್ಯದ ಎಲ್ಲಾ ಕಡೆ ಪಂಚರತ್ನ ಯಾತ್ರೆ ಸಂಚರಿಸಲಿದೆ. ಹೀಗಾಗಿ ಇಲ್ಲಿ ಕುಮಾರಸ್ವಾಮಿಯವರು ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನರ ಜೊತೆಗೆ ನಿಲ್ಲುವೆ ಎಂದಿದ್ದಾರೆ.
Advertisement
Advertisement
ಯೋಗೇಶ್ವರ್ ತಿರುಗೇಟು:
ನಿಖಿಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಪಿ ಯೋಗೇಶ್ವರ್, ನಾಲ್ಕುವರೆ ವರ್ಷಗಳಿಂದ ನಿಖಿಲ್ ಕುಮಾರಸ್ವಾಮಿ ಎಲ್ಲಿದ್ರು? ಚುನಾವಣೆಗೆ 6 ತಿಂಗಳಿರುವಾಗ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕಾರ್ಯಕರ್ತರ ಮನೆಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅವರಿಗೆ ಕ್ಷೇತ್ರದ ಮೇಲೆ ನಿಜವಾದ ಕಾಳಜಿ ಇಲ್ಲ. ಈಗ ಕ್ಷೇತ್ರಕ್ಕೆ ಬರುತ್ತಿರುವುದು ಪೊಲಿಟಿಕಲ್ ಗಿಮಿಕ್. ಚುನಾವಣೆ ದೃಷ್ಟಿಯಿಂದ ಕ್ಷೇತ್ರದಲ್ಲಿ ಓಡಾಟ ಮಾಡುತ್ತಿದ್ದಾರೆ. ಅವರ ಪಕ್ಷ ಸಂಘಟನೆಗೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಮುಂದೆ ನಾನು ಹಾಲಿ ಆಗಬೇಕಾ, ಮಾಜಿ ಆಗಬೇಕಾ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಅವರ ಹಾಗೆ ಕಲ್ಲು, ಮೊಟ್ಟೆ ಹೊಡೆಯುವ ಸಂಸ್ಕೃತಿ ನಮ್ಮದಲ್ಲ ಎಂದು ನಿಖಿಲ್ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ