– ‘ನೈಸ್’ ಹೋರಾಟ ಕೈಬಿಡಿ, ಚುನಾವಣೆ ಖರ್ಚು ನೋಡಿಕೊಳ್ತೀವಿ ಅಂತ ಒತ್ತಡ ಬರ್ತಿದೆ
– ನಾನೊಬ್ಬ ಸುಮ್ಮನೆ ಇದ್ರೆ ಜಮೀನು ಲೂಟಿ ಹೊಡೆಯುತ್ತಾರೆ ಎಂದ ಕೇಂದ್ರ ಸಚಿವ
ಬೆಂಗಳೂರು: ಇವರ ರೀತಿ ಬೆದರಿಸಿ ನಾವು ಕಾನೂನುಬಾಹಿರವಾಗಿ ಜಮೀನು ಖರೀದಿ ಮಾಡಿರೋದು ಪ್ರೂವ್ ಮಾಡಿದ್ರೆ ಪಬ್ಲಿಕ್‌ನಲ್ಲಿ ನೇಣು ಹಾಕಿಕೊಳ್ತೀನಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌ಗೆ (D.K.Shivakumar) ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಟಾಂಗ್ ಕೊಟ್ಟಿದ್ದಾರೆ.
ನೈಸ್ ಯೋಜನೆಯಿಂದ (NICE Project) ಭೂಮಿ ಕಳೆದುಕೊಂಡವರನ್ನು ಕೇಂದ್ರ ಸಚಿವ ಭೇಟಿಯಾದರು. ತೋಟದ ಗುಡ್ಡಹಳ್ಳಿ ಅಂಚೆಪಾಳ್ಯ, ತಿರುಮಲಪುರ, ಕೆಜಿ ಶ್ರೀಕಂಠಪುರ, ಗಂಗನಹಳ್ಳಿ, ಕಾಚೋಹಳ್ಳಿ, ಹೊಸಹಳ್ಳಿ, ಗೊಲ್ಲರಹಟ್ಟಿ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಹೆಚ್‌ಡಿಕೆ, ನೈಸ್ ಯೋಜನೆಯಲ್ಲಿ ಲೂಟಿ ಮಾಡಿದ್ದಾರೆ. ಸಿಎಂ ಅವರ ಮೇಲೆ ನನಗೆ ಅಸೂಯೆ ಇಲ್ಲ. ಇನ್ನು 10 ವರ್ಷ ಸಿಎಂ ಆಗಿರಲಿ ಡಿಕೆಶಿವಕುಮಾರ್ ಬೇಡ ಅನ್ನಲ್ಲ. ರೈತರ ಜೊತೆ ಯಾಕೆ ಚೆಲ್ಲಾಟ ಆಡ್ತಾ ಇದ್ದೀರಾ? ಸಿಎಂ ನಮ್ಮ ಜಮೀನು ಇಲ್ಲ ಅಂತ ಕೇಳ್ತಾರೆ. ಕುಮಾರಸ್ವಾಮಿ ಎಲ್ಲಿಂದ ಬಂದ್ರು ಅಂತಾರೆ ಸಿಎಂ. ನಾವೇನು ಪಾಕಿಸ್ತಾನದಿಂದ ಬಂದಿದ್ದೀವಾ? ನಾವೂ ಕರ್ನಾಟಕದವರೇ ಎಂದು ಕಿಡಿಕಾರಿದರು. ಇದನ್ನೂ ಓದಿ: ರೈತರಿಗೆ 25 ಸಾವಿರ ಪರಿಹಾರ ಕೊಟ್ಟರೆ ಮಾತ್ರ ಸರ್ವಪಕ್ಷ ನಿಯೋಗದಲ್ಲಿ ಭಾಗಿ- ಛಲವಾದಿ
ನಾನು ರಾಜಕೀಯಕ್ಕೆ ಬರುವ ಮುನ್ನ ಬಿಡದಿಯಲ್ಲಿ 44 ಎಕರೆ ಜಮೀನು ಖರೀದಿ ಮಾಡಿದ್ದೇನೆ. ನಾನು ನನ್ನ ಸಹೋದರರು, ನನ್ನ ಕುಟುಂಬದವರು ಒಂದು ಇಂಚು ಕಾನೂನುಬಾಹಿರವಾಗಿ ಭೂಮಿ ಪಡೆದಿದ್ದರೆ ನೀವು ಪ್ರೂವ್ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ತಗೋತೀನಿ. ಇವರ ರೀತಿ ಬೆದರಿಸಿ ನಾವು ಕಾನೂನುಬಾಹಿರವಾಗಿ ಜಮೀನು ಖರೀದಿ ಮಾಡಿರೊದು ಪ್ರೂವ್ ಮಾಡಿದ್ರೆ ಪಬ್ಲಿಕ್ ನಲ್ಲಿ ನೇಣು ಹಾಕಿಕೊಳ್ತೀನಿ ಎಂದು ಸವಾಲು ಹಾಕಿದರು. ನಾವು ಸ್ವಾಭಿಮಾನದಲ್ಲಿ ಬದುಕಿದ್ದೇವೆ. ಈ ಪ್ರಾಜೆಕ್ಟ್ ಹೆಸರಿನಲ್ಲಿ ಎಷ್ಟು ಎಕರೆ ಜಮೀನು ಲೂಟಿದ್ದಾರೆ ಇವರು. ಸಿಎಂ ವಿರುದ್ಧ ಗುಡುಗಿದರು.
ಬ್ಲ್ಯಾಕ್‌ಮೇಲ್ ಮಾಡ್ತಿದ್ದೀನಿ ಅಂತ ಸಿಎಂ ಹೇಳ್ತಾರೆ. ನಾನು ಬ್ಲ್ಯಾಕ್‌ಮೇಲ್ ಮಾಡಿದ್ರೆ ಯಾಕೆ ನನ್ನ ಮೇಲೆ ಕೇಸ್ ಹಾಕಿಲ್ಲ. ಯಾರೋ ಒಬ್ಬ 3ಬಿ ಅಂತಾನೆ. ನೈಸ್‌ನಲ್ಲಿ ನೀವು ಏನೇನು ಮಾಡಿದ್ದೀರಾ ಅನ್ನೋ ದಾಖಲಾತಿ ನನ್ನ ಬಳಿ ಇದೆ. ಪಶ್ಚಿಮ ಬಂಗಾಳ ರೀತಿ ನಿಮ್ಮ ಭೂಮಿ ವಾಪಸ್ ಬರಬೇಕು. ಮಹೇಶ್ ರೆಡ್ಡಿ ಅನ್ನೋನು AMR ಅಂತ ಇದೆ. ಇದೆಲ್ಲಾ ನಡೆಸ್ತಾ ಇದ್ದಾರೆ. ನಮ್ಮ ಮೇಲೆ ಯಾವ ತನಿಖೆ ಬೇಕಾದ್ರು ಮಾಡಿ. ದೇವೇಗೌಡರು ಪ್ರಧಾನಿ ಆದಾಗಿಂದ ಇಲ್ಲಿವರೆಗೂ ನಮ್ಮ ಆಸ್ತಿ ಬಗ್ಗೆಯೂ ತನಿಖೆ ಮಾಡಿ. ನಮ್ಮ ಆಸ್ತಿ, ನಮ್ಮ ಕುಟುಂಬದ ಬಗ್ಗೆ ಯಾವುದೇ ತನಿಖೆ ಮಾಡಿ ಎಂದು ಸವಾಲು ಹಾಕಿದರು.
ಖೇಣಿ ಬಂಧನ ಆಗಬೇಕು. ಸಿದ್ದಗಂಗಾ ಮಠದ ಆಸ್ತಿ ಹೊಡೆದುಕೊಂಡು ಕೂತಿದ್ದಾರೆ. ಇಂತಹ ಸಿಎಂಗೆ ಸಹಕಾರ ಕೊಡ್ತೀರಾ ನೀವು? AK-DK ಈ ಜಮೀನು ಲೂಟಿ ಹೊಡೆಯುತ್ತಿದ್ದಾರೆ. ದುಡ್ಡಿನ ಅಹಂಕಾರ, ಅಧಿಕಾರದ ಅಹಂಕಾರದಲ್ಲಿ ಕೇಕೆ ಹಾಕುತ್ತಿದ್ದಾರೆ. ಕೊನೆಗೆ ಗೆಲ್ಲೋದು ಸತ್ಯ ಧರ್ಮ. ನಿಮ್ಮ ಜೊತೆ ಹೋರಾಟಕ್ಕೆ ನಾನು ಇದ್ದೀನಿ. ನೀವು ಎಚ್ಚೆತ್ತುಕೊಳ್ಳಬೇಕು. ಈ ಸಿಎಂಗೆ ಕನಿಕರಬೇಡವಾ? ಸಿಎಂ ಮಾಡಿರೋದು ಹಣ ಮಾಡೋಕೆ ಅಲ್ಲ. ಜನರ ಕಷ್ಟಕ್ಕೆ ಸ್ಪಂದನೆ ನೀಡಬೇಕು. ನಿಮ್ಮ ಭೂಮಿ ವಾಪಸ್ ಕೊಡಿಸೋವರೆಗೂ ನಾನು ಸುಮ್ಮನೆ ಇರೊಲ್ಲ. ನಿಮ್ಮ ಜತೆ ಇರ್ತೀನಿ. ರೈತರ ಭೂಮಿ ವಾಪಸ್ ಕೊಡಬೇಕು. ದೊಡ್ಡ ಬಿಲ್ಡಿಂಗ್ ಇದ್ದರೂ, ಅಪಾರ್ಟ್ಮೆಂಟ್ ಇದ್ದರೂ ಖಾಲಿ ಮಾಡಿಸಿ ಅಲ್ಲಿ ರೈತರಿಗೆ ಜಾಗ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಡಬಲ್ ಎಂಟ್ರಿ ಹೊರತುಪಡಿಸಿ ಬೇರೆ ಫಾರಂ 7 ಅರ್ಜಿ ಪರಿಗಣಿಸದಂತೆ ಸೂಚನೆ: ಡಿಕೆಶಿ
ರೈತರ ಭೂಮಿ ವಾಪಸ್ ಕೊಡಬೇಕು. ನನಗೆ ರಾಜಕೀಯ ಬೇಕಿಲ್ಲ. ರೈತರ ಭೂಮಿ ವಾಪಸ್ ಕೊಡಿಸೋದು ನನ್ನ ಹೋರಾಟ. ಜನರು ಧ್ವನಿ ಎತ್ತಬೇಕು. ನಾನು ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಆಂಧ್ರಪ್ರದೇಶದ ಮಹೇಶ್ ರೆಡ್ಡಿ ಜೊತೆ ಸಿಎಂ ಡಿಕೆ ಶಿವಕುಮಾರ್ ಒಟ್ಟಾಗಿ ಭೂಮಿ ಹೊಡೆಯೋಕೆ ನಿಂತಿದ್ದಾರೆ. ಜನರಿಗೆ ತಲೆ ಕೆಡಿಸುವ ಕೆಲಸ ಮಾಡ್ತಾ ಇದ್ದಾರೆ ಸಿಎಂ. ಯಾರನ್ನು ಬೇಕಾದ್ರು ಕೊಂಡು ಕೊಳ್ತೀವಿ ಅಂತ ಇದ್ದಾರೆ. ನಿಮ್ಮ ಪರ ನಾನು ಇರ್ತೀನಿ ಎಂದು ರೈತರಿಗೆ ಹೆಚ್‌ಡಿಕೆ ಅಭಯ ನೀಡಿದರು.
ನೈಸ್ ಟೋಲ್ ಪ್ಲಾಜಾ ಬಳಿ ದೊಡ್ಡತೊಗೂರು, ಚಿಕ್ಕತೊಗೂರು, ಎಲೆಕ್ಟ್ರಾನಿಕ್ ಸಿಟಿ, ಕೊನಪ್ಪನ ಅಗ್ರಹಾರ, ಬೇಗೂರು ರೈತರ ಭೇಟಿಯಾಗಿ ಕೇಂದ್ರ ಸಚಿವರು ಅಹವಾಲು ಸ್ವೀಕರಿಸಿದರು. ನಂತರ ಮಾತನಾಡಿದ ಹೆಚ್‌ಡಿಕೆ, ದೇವೇಗೌಡರು ಓಡಾಡೋ ಪರಿಸ್ಥಿತಿ ಇಲ್ಲ. ವ್ಹೀಲ್‌ಚೇರ್‌ನಲ್ಲಿ ರೈತರ ಪರ ನಾನು ಬರ್ತೀನಿ ಅಂತಾರೆ. ರೈತರ ಜಮೀನು ನಾನು ವಾಪಸ್ ಕೊಡಿಸೋದು ನನ್ನ ಜವಾಬ್ದಾರಿ. ನೀವು ಒಟ್ಟಾಗಿ ಇರಬೇಕು. ನನ್ನ ಮೇಲೆ ಎಷ್ಟು ಒತ್ತಡ ಇದೆ. ಈ ಹೋರಾಟ ಕೈ ಬಿಡಿ ಅಂತ ಬರ್ತಿದೆ. ಚುನಾವಣೆ ಖರ್ಚು ಹಿಡಿದು ಎಲ್ಲಾ ಕೊಡ್ತೀವಿ ಅಂತ ಬರ್ತಿದೆ. ನಾನು ಒಬ್ಬ ಸುಮ್ಮನೆ ಇದ್ದರೆ ಜಮೀನು ಲೂಟಿ ಹೊಡೆಯುತ್ತಾರೆ. ನಿಮ್ಮ ಊರಿನ ಜನರಿಗೂ ನೀವು ಇದರ ಬಗ್ಗೆ ಹೇಳಬೇಕು. ಜನಾಂದೋಲನ ಇದರ ವಿರುದ್ಧ ಆಗಬೇಕು. ಮೊದಲು ಶಾಂತಿಯುತವಾಗಿ ಹೋರಾಟ ಮಾಡೋಣ. ಇದನ್ನ ವೀಕ್‌ನೆಸ್ ಅಂದರೆ ದೊಡ್ಡ ಹೋರಾಟ ಮಾಡೋಣ. ನಾನೇ ಮುಂದೆ ನಿಲ್ತೀನಿ. ನಿಮ್ಮನ್ನ ಮುಂದೆ ಬಿಡಲ್ಲ. ಮುಂದೆ ಮೀಟಿಂಗ್ ಕರೆಯುತ್ತೇನೆ. ಯಾವ ರೀತಿ ಮುಂದಿನ ಹೋರಾಟ ಅಂತ ಸಿದ್ಧ ಮಾಡ್ತೀನಿ ಎಂದರು.

