ಮಂಗಳೂರು: ‘ತಾಂಟ್ರೆ ನೀ ಬಾ ತಾಂಟ್’ ಖ್ಯಾತಿಯ ರಿಯಾಝ್ ಫರಂಗಿಪೇಟೆ (Riyaz Farangipete) ಮನೆಗೆ ಇಂದು ಬೆಳಗ್ಗೆ ಎನ್‍ಐಎ (NIA) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳ್ಳಾರೆಯ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಕೇಸ್‍ನಲ್ಲಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಈಗಾಗಲೇ 33 ಕಡೆ ದಾಳಿ ನಡೆಸಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಅಂತೆಯೇ ಇಂದು ಅಧಿಕಾರಿಗಳು ಎಸ್‍ಡಿಪಿಐ (SDPI) ರಾಷ್ಟ್ರೀಯ ಕಾರ್ಯದರ್ಶಿ ಮನೆಗೆ ದಾಳಿ ನಡೆಸಿದ್ದಾರೆ.
ರಿಯಾಜ್ ಮನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್ ಬಳಿಯ ಪರ್ಲಿಯಾ ಎಂಬಲ್ಲಿದೆ. ಬಂಟ್ವಾಳ (Bantwala) ಪೊಲೀಸರ ನೆರವು ಪಡೆದು ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ರಿಯಾಜ್ ಮೊಬೈಲ್ ವಶಕ್ಕೆ ಪಡೆದು ತಂಡ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದೆ.
ಅಧಿಕಾರಿಗಳು ದಾಳಿ ನಡೆಸಿದ ಸುದ್ದಿ ತಿಳಿದು ಮನೆಯ ಎದುರು ಎಸ್.ಡಿ.ಪಿ.ಐ. ಪಕ್ಷದ ಕಾರ್ಯಕರ್ತರು ಜಮಾಯಿಸಿ ಅಧಿಕಾರಿಗಳ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವಾಸಕ್ಕೆ ಯೋಗ್ಯವಲ್ಲ ಎನ್ನುವವರು ಬೆಂಗಳೂರಿಗೆ ಬರಬೇಡಿ: ಮುನಿರತ್ನ
ಕೆಲವು ತಿಂಗಳ ಹಿಂದೆ ಭಾಷಣ ಮಾಡುವಾಗ ರಿಯಾಜ್ ಫರಂಗಿಪೇಟೆ ‘ನೀ ತಾಂಟ್ರೆ ಬಾ ತಾಂಟ್’ ಎಂದು ಹೇಳಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗಿತ್ತು. ಗ್ರಾಮ ಪಂಚಾಯತ್ ನಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ, ನೀ ತಾಂಟ್ರೆ ಬಾ ತಾಂಟ್ ಅಂತ ಹೇಳಿದ್ದರು. ಬಿಜೆಪಿ (BJP) ಮುಖಂಡರಾದ ನಳೀನ್ ಕುಮಾರ್ ಕಟೀಲ್, ಸಿ.ಟಿ. ರವಿ ಮತ್ತು ಹರೀಶ್ ಪೂಂಜಾ ಕುರಿತು ಈ ವಾಕ್ಯವನ್ನು ಹೇಳಿದ್ದರು.