ಬೆಂಗಳೂರು: ಬಜರಂಗದಳ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ (Suhas Shetty) ಕೊಲೆ ಪ್ರಕರಣದ 11 ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ವಿಶೇಷ ನ್ಯಾಯಾಲಯ ದೋಷಾರೋಪ ಪಟ್ಟಿ ಸಲ್ಲಿಸಿದೆ.
NIA Chargesheets 11 Arrested Accused in Suhas Shetty Murder Case pic.twitter.com/1smteoEdK0
— NIA India (@NIA_India) October 30, 2025
ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ನಿಪದವಿನಲ್ಲಿ ಮೇ 1ರಂದು ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ 1967, ಭಾರತೀಯ ನ್ಯಾಯ ಸಂಹಿತೆ, 2023 ಹಾಗೂ ಸಶಸ್ತ್ರ ಕಾಯ್ದೆ, 1959 ಅಡಿಯಲ್ಲಿ 11 ಆರೋಪಿಗಳನ್ನ ಬಂಧಿಸಲಾಗಿತ್ತು. ಬಂಧಿತ ಆರೋಪಿಗಳಾದ ಮಂಗಳೂರಿನ ಅಬ್ದುಲ್ ಸಫಾನ್ ಅಲಿಯಾಸ್ ಕವಲೂರು ಸಫಾನ್, ನಿಯಾಜ್ ಅಲಿಯಾಸ್ ನಿಯಾ, ಮೊಹಮ್ಮದ್ ಮುಸಾಮೀರ್, ನೌಷಾದ್, ಆದಿಲ್ ಮಹರೂಫ್, ಅಜರುದ್ದೀನ್, ಅಬ್ದುಲ್ ಖಾದರ್, ಖಲಂದರ್ ಶಫಿ, ಎಂ.ನಾಗರಾಜ್, ರಂಜಿತ್ ಮತ್ತು ಮೊಹಮ್ಮದ್ ರಿಜ್ವಾನ್ ವಿರುದ್ಧ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಲು ಹತ್ಯೆ ಮಾಡಲಾಗಿದೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಬಿಜೆಪಿಯವ್ರು ದೇಶದಲ್ಲಿ ಸುಳ್ಳು ಸೃಷ್ಟಿಸುವ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ, ಅದಕ್ಕೆ ಮೋದಿ ಪ್ರಿನ್ಸಿಪಾಲ್ – ರಾಮಲಿಂಗಾರೆಡ್ಡಿ
ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಪ್ರಕರಣವನ್ನು ಕೈಗೆತ್ತಿಕೊಂಡ ಎನ್‌ಐಎ, ಗುರಿಯಿಟ್ಟು ಹತ್ಯೆ ಮಾಡಲಾಗಿದ್ದು, ಇದರ ಹಿಂದೆ ದೊಡ್ಡ ಪಿತೂರಿ ಕಂಡುಬಂದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಸುಹಾಸ್ ಶೆಟ್ಟಿ ಚಲನವಲನಗಳನ್ನ ಹಲವು ತಿಂಗಳುಗಳಿಂದ ಸೂಕ್ಷ್ಮವಾಗಿ ಗಮನಿಸಿ, 7 ಆರೋಪಿಗಳು ಎರಡು ಕಾರುಗಳಲ್ಲಿ ಹಿಂಬಾಲಿಸಿಕೊಂಡು ಬಂದು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ಆದಿಲ್ ಮಹರೂಫ್ ಹಂತಕರಿಗೆ ಹಣಕಾಸು ನೆರವು ನೀಡಿದ್ದ. ಬಂಧಿತರ ಪೈಕಿ ಅಬ್ದುಲ್ ಸಫ್ಘಾನ್ ಸೇರಿದಂತೆ ಬಹುತೇಕರು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‌ಡಿ) ಸಂಘಟನೆಯ ಮಾಜಿ ಸದಸ್ಯರು. ಬಂಧಿತ ಮತ್ತೊಬ್ಬ ಆರೋಪಿ ಅಬ್ದುಲ್ ರಜಾಕ್ ವಿರುದ್ಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

