ಬೆಂಗಳೂರು: ಭರ್ಜರಿ ತಯಾರಿ ನಡೆಸಿದ ಬಳಿಕ ಪಿಎಫ್‌ಐ(PFI) ಮುಖಂಡರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ(NIA) ದಾಳಿ ನಡೆಸಿ ಕರ್ನಾಟಕದಲ್ಲಿ(Karnataka) 7 ಮಂದಿಯನ್ನು ಬಂಧಿಸಿದ್ದಾರೆ.
ಪಿಎಫ್ಐನ ಪ್ರತಿ ಮುಖಂಡ, ಕಾರ್ಯಕರ್ತರು, ಪ್ರಮುಖರ ಮಾಹಿತಿ ಕಲೆ ಹಾಕಲಾಗಿತ್ತು. ಯಾವ ಸಮಯದಲ್ಲಿ ಮನೆಯಲ್ಲಿ ಇರುತ್ತಾರೆ, ಹೊರಗಡೆ ಹೋಗುತ್ತಾರೆ ಎಂಬುದನ್ನು ಮೊದಲೇ ತಿಳಿದುಕೊಳ್ಳಲಾಗಿತ್ತು.
ಎನ್‌ಐಎ ದಾಳಿ ಮೊದಲೇ ನಡೆಯಬೇಕಿತ್ತು. ಆದರೆ ಕೇರಳದಲ್ಲಿ ಪಿಎಫ್‌ಐ ದೊಡ್ಡ ಮಟ್ಟದ ಕಾರ್ಯಕ್ರಮ, ಸಭೆ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ನಾಯಕರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ತಡವಾಗಿ ದಾಳಿ ನಡೆಸಲಾಗಿದೆ.
ಆಡುಗೋಡಿಯ ಟೆಕ್ನಿಕಲ್ ಸೆಂಟರ್ ನಲ್ಲಿ ಶಂಕಿತ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ನಗದಿನ ಮೂಲ, ಧರ್ಮ ಸಂಬಂಧ ಪುಸ್ತಕಗಳು, ಪೆನ್ ಡ್ರೈವ್ , ಲ್ಯಾಪ್ ಟಾಪ್, ಮೊಬೈಲ್, ಎಲೆಕ್ಟ್ರಾನಿಕ್ ಸಾಧನಗಳ ಒಳಗಡೆ ಏನಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್
ಬಂಧನಕ್ಕೆ ಒಳಗಾದ 7 ಮಂದಿ ಯಾರು?
1 ಅನೀಸ್ ಅಹಮದ್
ಬೆಂಗಳೂರು ಮೂಲದವನಾದ ಅನೀಸ್ ಅಹ್ಮದ್ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು ಪಿಎಫ್‌ಐ ರಾಜ್ಯಮಟ್ಟದ ನಾಯಕನಾಗಿದ್ದ. ಈತ ಕಳೆದ 10 ದಿನಗಳಿಂದ ಮಲಬಾರ್ ಕಾನ್ಫರೆನ್ಸ್ ಹೆಸರಿನ ಸಭೆಯಲ್ಲಿ ಭಾಗವಹಿಸಿದ್ದ.
2 ಅಫ್ಸರ್ ಪಾಷಾ
ರಾಜ್ಯಮಟ್ಟದ ನಾಯಕನಾಗಿರುವ ಈತನ ಮೇಲೆ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಆಗ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಪಾಷಾ ಪಾದರಾಯನಪುರದ ಟೆಲಿಕಾಂ ಲೇಔಟ್ನ ಬಾಡಿಗೆ ಮನೆಗೆ ತೆರಳಿದ್ದ. ಪ್ರಸ್ತುತ ವಿಜಯನಗರದಲ್ಲಿ ಲಸ್ಸಿ ಶಾಪ್ ನಡೆಸುತ್ತಿದ್ದ.
3 ಅಬ್ದುಲ್ ವಹೀದ್
ತಮಿಳುನಾಡು ಮೂಲದ ಈತ ಜಯಮಹಲ್ ಪ್ಯಾಲೇಸ್ ಹತ್ತಿರ ವಾಸವಿದ್ದ. ಪಿಎಫ್‌ಐ ರಾಜ್ಯ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಯಾಗಿದ್ದಾನೆ.
4 ಯಾಸಿರ್ ಹಸನ್
ಮೂಲತಃ ಮಂಗಳೂರಿನವನಾದ ಯಾಸಿರ್ ಅರಾಫತ್ ಬೆಂಗಳೂರಲ್ಲಿ ಪಿಎಫ್‌ಐ ಕಾರ್ಯಚಟುವಟಿಕೆ ನೋಡಿಕೊಳ್ಳುತ್ತಿದ್ದ. ಕಾವಲಬೈರಸಂದ್ರದಲ್ಲಿ ಮನೆ ಮಾಡಿಕೊಂಡಿದ್ದ ಈತನಿಂದಲೇ ಬಹುತೇಕ ಪಿಎಫ್‌ಐ ಕಚೇರಿ ಕೆಲಸಗಳ ನಿರ್ವಹಣೆ ನಡೆಯುತ್ತಿತ್ತು.
5 ಮೊಹಮ್ಮದ್ ಶಕೀಬ್
ಮೂಲತಃ ತಮಿಳುನಾಡಿನ ಮೊಹಮ್ಮದ್ ಶಾಕಿಬ್ ರಿಚ್ಮಂಡ್ ಟೌನ್ನ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾನೆ.
6 ಶಾಹಿದ್ ನಸೀರ್
ಬೆಂಗಳೂರು ಮೂಲದ ಶಾಹಿದ್ ನಸೀರ್ ಸ್ಟೇಟ್ ಸೋಷಿಯಲ್ ಮೀಡಿಯಾ ಇನ್ಚಾರ್ಜ್ ಆಗಿದ್ದು ಪಿಎಫ್ಐನಲ್ಲಿ ಸಕ್ರಿಯ ಸದಸ್ಯನಾಗಿ ಗುರುತಿಸಿಕೊಂಡಿದ್ದಾನೆ.
7. ಮೊಹಮ್ಮದ್ ಫಾರೂಖ್
ಬೆಂಗಳೂರು ಮೂಲದ ಈತ ಪಿಎಫ್‌ಐ ಸಕ್ರಿಯ ಮುಖಂಡನಾಗಿದ್ದಾನೆ.