ಬೆಂಗಳೂರು: ನವವಿವಾಹಿತೆಯೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯದ ನೆಲಮಂಗಲ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ನಡೆದಿದೆ.
22 ವರ್ಷದ ನೇತ್ರಾವತಿ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಶನಿವಾರ ಮಧ್ಯಾಹ್ನ ನೇತ್ರಾವತಿ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಅಸ್ವಸ್ಥರಾದ ನೇತ್ರಾವತಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನೇತ್ರಾವತಿ ಇಂದು ಸಾವನ್ನಪ್ಪಿದ್ದಾರೆ.
ನೇತ್ರಾವತಿ ಮೂರು ತಿಂಗಳು ಹಿಂದೆಯೇ ರೇಣುಕೇಶ್ ಎಂಬಾತರೊಂದಿಗೆ ಮದುವೆಯಾಗಿದ್ದರು. ರೇಣುಕೇಶ್ ಮತ್ತು ನೇತ್ರಾವತಿ ಇಬ್ಬರೂ ಪರಸ್ಪರ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು.
ವರದಕ್ಷಿಣೆ ಕಿರುಕುಳ ತಾಳಲಾರದೆ ನಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ನೇತ್ರಾವತಿ ಪೋಷಕರು ಆರೋಪಿಸುತ್ತಿದ್ದಾರೆ. ಸದ್ಯ ರೇಣುಕೇಶ್ ರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.