ಮಂಡ್ಯ: ನಮ್ಮ ಆಸೆಯಂತೆ ಮದುವೆಯಾಗಿ ಅದನ್ನು ಉಳಿಸಿಕೊಳ್ಳಲಾಗದೆ ಸಾಯುತ್ತಿದ್ದೇವೆ ಎಂದು ಡೆತ್‍ನೋಟ್ ಬರೆದಿಟ್ಟು ಯುವ ಜೋಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮೂಲತಃ ಮಂಡ್ಯದ ಹೆಬ್ಬಕವಾಡಿ ಗ್ರಾಮದವರಾಗಿದ್ದ ನವೀನ್(22) ಮತ್ತು ಅಶ್ವಿನಿ(21) ನೇಣಿಗೆ ಶರಣಾದ ನವ ಜೋಡಿ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಕಳೆದ 20 ದಿನಗಳ ಹಿಂದಷ್ಟೇ ಮದುವೆಯಾಗಿದ್ದರು. ಆದರೆ ಈಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ವಗ್ರಾಮ ಹೆಬ್ಬಕವಾಡಿಯಿಂದ ಮೂರು ದಿನಗಳ ಹಿಂದಷ್ಟೇ ತಮ್ಮ ಅಜ್ಜಿಯ ಊರಾದ ಅಂಚೆದೊಡ್ಡಿ ಗ್ರಾಮಕ್ಕೆ ಹೋಗಿದ್ದರು. ಆದರೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ಯುವ ಜೋಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡೆತ್‍ನೋಟ್
ನಮ್ಮ ಸಾವಿಗೆ ಯಾರೂ ಕಾರಣರಲ್ಲ. ನಾನು ಆಸೆಯಿಂದ ಸಾವಿಗೆ ಶರಣಾಗುತ್ತಿದ್ದೇವೆ. ನಮ್ಮ ಆಸೆಯಂತೆ ಮದುವೆಯಾಗಿ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಾಯುತ್ತಿದ್ದೇವೆ. ಅಶ್ವಿನಿ 20,000 ಸಾವಿರ ರೂ.ಗಳನ್ನು ತಂದಿದ್ದಳು ಅದನ್ನು ಅವರ ತಾಯಿಗೆ ತಿಳಿಸಿದ್ದೇನೆ. ನಮ್ಮ ಬಗ್ಗೆ ಯೋಚಿಸಬೇಡಿ, ಎಲ್ಲರು ಚೆನ್ನಾಗಿರಿ. ಅದೆ ನಮ್ಮ ಕೊನೆಯ ಆಸೆ. ಅಣ್ಣ ಅವ್ವನನ್ನು ಚೆನ್ನಾಗಿ ನೋಡಿಕೋ. ನಮ್ಮ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದು ಒಟ್ಟಿಗೆ ನೇಣಿಗೆ ಶರಣಾಗಿದ್ದಾರೆ.
ಯುವ ಜೋಡಿಯ ಆತ್ಮಹತ್ಯೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv