ಚಿಕ್ಕಬಳ್ಳಾಪುರ: ರೈಲಿಗೆ ಸಿಲುಕಿ ನವ ವಿವಾಹಿತ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವೀರಾಪುರದ ಬಳಿ ನಡೆದಿದೆ.
ದೊಡ್ಡಬಳ್ಳಾಪುರ ಶಾಂತಿನಗರದ ಲೀಲಾವತಿ ಮತ್ತು ವಿಜಯ್ ಕುಮಾರ್ ಮೃತ ಪ್ರೇಮಿಗಳು. ವೀರಾಪುರದ ಬಳಿ ರೈಲ್ವೆ ಹಳಿಗಳ ಮೇಲೆ ಯುವಕ-ಯುವತಿಯ ಮೃತದೇಹ ಪತ್ತೆಯಾಗಿದೆ. ಮೃತರ ಬಳಿ ಡೆತ್‍ನೋಟ್ ಸಹ ಪತ್ತೆಯಾಗಿದೆ.
ಡೆತ್‍ನೋಟ್‍ನಲ್ಲಿ ಏನಿದೆ?
ನನ್ನ ಹೆಸರು ಲೀಲಾವತಿ, ನಾನು ವಿಜಯ್ ಅನ್ನೋ ಹುಡುಗನನ್ನ ಇಷ್ಟಪಟ್ಟಿದ್ದೆ. ಮನೆಯಲ್ಲಿ ವಿಷಯ ಗೊತ್ತಾಗಿ ನನಗೆ ಹಿಂಸೆ ಕೊಟ್ಟರು. ಆದ್ದರಿಂದ ನಾವಿಬ್ಬರು ಮದುವೆ ಮಾಡಿಕೊಂಡಿದ್ದೇವೆ. ನಮಗೆ ಮದುವೆಯಾಗಿ ಒಂದು ತಿಂಗಳ ಆಗಿದೆ. ಆದರೆ ನಾವಿಬ್ಬರು ಮದುವೆಯಾಗಿದ್ದರು ನಮ್ಮ ಮಾವನಾದ ಮಂಜುನಾಥ್.ಆರ್ ನಮ್ಮಿಬ್ಬರಿಗೆ ಹಿಂಸೆಕೊಡುತ್ತಿದ್ದಾರೆ. ಅವರ ಹಿಂಸೆ ತಡೆಯಲಾರದೇ ನಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸಾವಿಗೆ ಮಾವ ಮಂಜುನಾಥ್ ಕಾರಣ ಎಂದು ಬರೆದಿದ್ದಾರೆ.
ಈ ಸಂಬಂಧ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.