ಹ್ಯಾಮಿಲ್ಟನ್: ಭಾರತ (India) ಹಾಗೂ ನ್ಯೂಜಿಲೆಂಡ್ (New Zealand) ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಮಳೆ (Rain) ಕಾಟ ಕೊಟ್ಟಿದೆ. ಪರಿಣಾಮ ಕೇವಲ 12 ಓವರ್‌ಗಳ ಆಟದ ಬಳಿಕ ಪಂದ್ಯವನ್ನು ರದ್ದು ಪಡಿಸಲಾಯಿತು.
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಇತ್ತ ಬ್ಯಾಟಿಂಗ್ ಆರಂಭಿಸಿದ ಭಾರತ 4.5 ಓವರ್‌ಗಳಲ್ಲಿ 22 ರನ್ ಗಳಿಸಿದ್ದ ವೇಳೆ ಮಳೆ ಆರಂಭವಾಯಿತು. ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು. ಬಳಿಕ 29 ಓವರ್‌ಗಳಿಗೆ ಪಂದ್ಯವನ್ನು ಇಳಿಕೆ ಮಾಡಿ ಆಡಿಸಲಾಯಿತು. ಮಳೆ ಬಿಟ್ಟ ಬಳಿಕ ಅರಂಭದಲ್ಲೇ ಶಿಖರ್ ಧವನ್ 3 ರನ್ (10 ಎಸೆತ) ವಿಕೆಟ್ ಕಳೆದುಕೊಂಡಿತು. ನಂತರ ಶುಭಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಆರಂಭಿಸುತ್ತಿದ್ದಂತೆ ಅತ್ತ ಮಳೆ ಆರ್ಭಟ ಶುರುಮಾಡಿತು. ಇದನ್ನೂ ಓದಿ: ಡು ಆರ್ ಡೈ ಪಂದ್ಯದಲ್ಲಿ ಮಿಂಚಿದ ಮೆಸ್ಸಿ – ನಾಕೌಟ್ ರೇಸ್‍ನಲ್ಲಿ ಉಳಿದುಕೊಂಡ ಅರ್ಜೆಂಟೀನಾ
12.5 ಓವರ್‌ಗಳಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 89 ರನ್ ಪೇರಿಸಿದ್ದ ವೇಳೆ ಮಳೆ ಬಂದು ಪಂದ್ಯವನ್ನು ಮತ್ತೆ ಸ್ಥಗಿತಗೊಳಿಸಲಾಯಿತು. ಈ ವೇಳೆ ಗಿಲ್ ಅಜೇಯ 45 ರನ್ (42 ಎಸೆತ, 4 ಬೌಂಡರಿ, 1 ಸಿಕ್ಸ್) ಮತ್ತು ಸೂರ್ಯ ಕುಮಾರ್ ಯಾದವ್ 34 ರನ್ (25 ಎಸೆತ, 2 ಬೌಂಡರಿ, 3 ಸಿಕ್ಸ್) ಚಚ್ಚಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ಬಳಿಕ ಮತ್ತೆ ಮೈದಾನಕ್ಕಿಳಿಯಲು ವರುಣ ಅವಕಾಶ ನೀಡಲಿಲ್ಲ. ಪಂದ್ಯವನ್ನು ರದ್ದು ಪಡಿಸಲು ಮ್ಯಾಚ್ ರೆಫ್ರಿ ನಿರ್ಧರಿಸಿದರು. ಇದನ್ನೂ ಓದಿ: ಭಾರತಕ್ಕೆ ವಿಶ್ವಕಪ್ ಟೂರ್ನಿ ಬಹಿಷ್ಕರಿಸೋ ಬೆದರಿಕೆ ಹಾಕಿದ ಪಾಕ್
ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜಯಿಸಿದ್ದ ನ್ಯೂಜಿಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಮೂರನೇ ಪಂದ್ಯ ಬುಧವಾರ ಕ್ರೈಸ್ಟ್‌ಚರ್ಚ್ ಕ್ರೀಡಾಂಗಣದಲ್ಲಿ ನಡೆಯಲಿದೆ.