ನವದೆಹಲಿ: ರೈಲುಗಳಲ್ಲಿಯ ಕಳ್ಳತನದ ಪ್ರಕರಣಗಳು ಕಡಿಮೆ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ರೈಲ್ವೇ ನಿಲ್ದಾಣ, ರೈಲುಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಈ ರೀತಿಯ ಪ್ರಕರಣಗಳನ್ನು ತಡೆಯುವಲ್ಲಿ ರೈಲ್ವೇ ಪೊಲೀಸರು ವಿಫಲವಾಗುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಇದೀಗ ಕಳ್ಳರು ಹೊಸ ಶೈಲಿಯಲ್ಲಿ ಕಳ್ಳತನಕ್ಕೆ ಮುಂದಾಗಿದ್ದು, ಪ್ರಯಾಣಿಕರು ಎಚ್ಚರಿಕೆಯಿಂದ ಪ್ರಯಾಣಿಸಬೇಕಿದೆ.
ಸಾಮಾನ್ಯವಾಗಿ ರೈಲು ಹತ್ತುವಾಗ, ಪ್ಲಾಟ್‍ಫಾರಂನಲ್ಲಿಯ ಬ್ಯಾಗ್ ಗಳು ಕಳ್ಳತನ ನಡೆದಿರುತ್ತವೆ. ಇದೀಗ ರಿಸರ್ವ್ ಮಾಡಿಕೊಂಡಿರುವ ಸೀಟ್ ತಮ್ಮದು ಎಂದು ಕಳ್ಳರು ಗಲಾಟೆ ಆರಂಭಿಸುತ್ತಾರೆ. ಪ್ರಯಾಣಿಕರ ಗಮನ ಬೇರೆಡೆ ಕೇಂದ್ರಿಕೃತವಾಗುತ್ತಿದ್ದಂತೆ ಅವರ ಬ್ಯಾಗ್ ತೆಗೆದುಕೊಂಡು ಮತ್ತೋರ್ವ ಎಸ್ಕೇಪ್ ಆಗುತ್ತಾನೆ. ಇದೇ ರೀತಿಯಲ್ಲಿ ಕಳ್ಳತನವೊಂದು ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ.
ಅಮೇಥಿಯ ನಿವಾಸಿ ವಿಕ್ರಮ್ ತನ್ನ ಸೋದರಿ ಸ್ನೇಹಲತಾ ಜೊತೆ ನೀಲಗಢಗೆ ತೆರಳಲು ಆನಂದ್ ವಿಹಾರ ಟರ್ಮಿನಲ್ ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ಸದ್ಭಾವನಾ ಎಕ್ಸ್ ಪ್ರೆಸ್ ಬರುತ್ತಿದ್ದಂತೆ ಎಸ್-2 ಬೋಗಿ ಹತ್ತಿದ್ದರು. ಮೊದಲೇ ಕಾಯ್ದಿರಿಸಿದ್ದ ಸೀಟ್ ನಂಬರ್ 21 ಮತ್ತು 22ರಲ್ಲಿ ಕುಳಿತು ಎಲ್ಲ ಬ್ಯಾಗ್ ಗಳನ್ನು ಕೆಳಗಡೆ ಇರಿಸುತ್ತಿದ್ದರು. ಈ ವೇಳೆ ಬೋಗಿಯೊಳಗೆ ಬಂದ ಮೂವರು ಈ ಸೀಟ್ ನಮ್ಮದು ಎಂದು ಗಲಾಟೆ ಮಾಡಿದ್ದಾರೆ. ವಿಕ್ರಮ್ ತಮ್ಮ ಸೀಟ್ ಎಂದು ಹೇಳಿದ್ರೂ ಮೂವರು ಜಗಳ ಮಾಡಲು ಆರಂಭಿಸಿದ್ದಾರೆ. ಮೂವರಲ್ಲಿ ಓರ್ವ ನಿಧಾನಕ್ಕೆ ಸೀಟ್ ಕೆಳಗೆ ಇರಿಸಿದ್ದ ಬ್ಯಾಗ್ ಜೊತೆ ಎಸ್ಕೇಪ್ ಆಗಿದ್ದಾನೆ ಎಂದು ಅಮೇಥಿ ರೈಲ್ವೇ ಪೊಲೀಸರು ಹೇಳಿದ್ದಾರೆ.
ಬ್ಯಾಗ್ ನಲ್ಲಿ ನಾಲ್ಕು ಸಾವಿರ ನಗದು, ಒಂದು ಚಿನ್ನದ ಚೈನ್, ವಜ್ರದ ರಿಂಗ್, ಚಿನ್ನದ ಕಿವಿಯೊಲೆ, ಎರಡು ಜೊತೆ ಕಾಲ್ಗಜ್ಜೆ ಮತ್ತು ಬಟ್ಟೆಗಳಿದ್ದವು. ರೈಲು ನಿಲ್ದಾಣಕ್ಕೆ ಬಂದು ನಿಂತಾಗ ಕಳ್ಳರು ಈ ರೀತಿ ಕಳ್ಳತನ ಮಾಡಿದ್ದಾರೆ. ರೈಲು ಹೊರಡುವ ಮೊದಲೇ ಎಸ್ಕೇಪ್ ಆಗಿದ್ದಾರೆ. ಬ್ಯಾಗ್ ಕಳ್ಳತನವಾದದ್ದು ಗಮನಕ್ಕೆ ಬಂದ ಕೂಡಲೇ ವಿಕ್ರಮ್ ಟಿಕೆಟ್ ಪರೀಕ್ಷಕ(ಟಿಸಿ)ರಿಗೆ ಮಾಹಿತಿ ನೀಡಿದ್ದಾರೆ. ಟಿಸಿ ಸಲಹೆಯಂತೆ ವಿಕ್ರಮ್ ಕೊನೆಯ ನಿಲ್ದಾಣದಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ.