ಬೆಂಗಳೂರು: ಬಿಬಿಎಂಪಿಯು ಪಾಡ್ ಟ್ಯಾಕ್ಸಿ (ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್-ಪಿಆರ್‍ಟಿಎಸ್) ಯೋಜನೆಯ ಟೆಂಡರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ಎಂಬೆಸಿ ಗ್ರೂಪ್ ಜೊತೆ ಸಹಭಾಗಿತ್ವ ಹೊಂದಿರುವ ಸ್ಮಾರ್ಟ್ ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಪ್ರೈವೇಟ್ (ಎಸ್‍ಪಿಆರ್ ಟಿಎಸ್) ಲಿಮಿಟೆಡ್ ಕಂಪೆನಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಟ್ರಿನಿಟಿ ಸರ್ಕಲ್‍ನಿಂದ ವೈಟ್‍ಫೀಲ್ಡ್ ಹಾಗೂ ಮಾನ್ಯತಾ ಟೆಕ್ ಪಾರ್ಕ್ ನಿಂದ ಕೆ.ಆರ್ ಪುರದವರೆಗೆ ಪಾಡ್ ಟ್ಯಾಕ್ಸಿ ಸೇವೆ ನೀಡುವ ಕುರಿತು ಯೋಜನೆ ಸಿದ್ಧಪಡಿಸಿ ಟೆಂಡರ್ ಕರೆದಿತ್ತು. ಆದರೆ ಈ ಟೆಂಡರ್‍ಗೆ ಎಸ್‍ಪಿಆರ್ ಟಿಎಸ್ ಕಂಪನಿ ಮಾತ್ರ ಅರ್ಜಿ ಸಲ್ಲಿಸಿದ ಕಾರಣ ಈ ಪಾಡ್ ಟ್ಯಾಕ್ಸಿಯ ನಿರ್ಮಾಣ ಯೋಜನೆಯ ಗುತ್ತಿಗೆ ಸಿಕ್ಕಿದೆ.
Advertisement
Advertisement
ಜಾರ್ಜ್ ಸಹಭಾಗಿತ್ವದ ಎಂಬಸ್ಸಿ ಗ್ರೂಪ್ ಜೊತೆ ಸಹಭಾಗಿತ್ವ ಹೊಂದಿರುವ ಎಸ್‍ಪಿಆರ್ ಟಿಎಸ್ 7.5 ಕೋಟಿ ಭದ್ರತಾ ಠೇವಣಿಯನ್ನು ಜನವರಿ 10 ರಂದು ಇಟ್ಟಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ 5 ಕೋಟಿ ರೂ.ಗಳನ್ನು ಠೇವಣಿ ಇಡಲು ಬಿಬಿಎಂಪಿ ಬಿಡ್ಡಿಂಗ್ ಕಂಪನಿಗಳಿಗೆ ಷರತ್ತು ವಿಧಿಸಿತ್ತು. ಟೆಂಡರ್ ಪಡೆಯಲು ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವವಾಗಿತ್ತು.
Advertisement
ಟೆಂಡರ್ ಪಡೆದಿರುವ ದೆಹಲಿ ಮೂಲದ ಎಸ್‍ಪಿಆರ್ ಟಿಎಸ್ ಕಂಪೆನಿ ಲಂಡನ್ ಹೀಥ್ರೂ ನಗರದಲ್ಲಿ ಪಾಡ್ ಟ್ಯಾಕ್ಸಿ ಸೇವೆ ನೀಡುತ್ತಿದೆ. ಈ ಕಂಪನಿಯ ನಿರ್ದೇಶಕರಾದ ಧ್ರುವ್ ಮನೋಜ್ ಪಟೇಲ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಜನವರಿ 10 ರಂದು ನಾವು ಟೆಂಡರ್‍ಗೆ ಅರ್ಜಿ ಸಲ್ಲಿಸಿದ್ದೇವೆ. ಬಿಬಿಎಂಪಿ ರೂಪಿಸಿರುವ ನಿಯಮಗಳ ಪ್ರಕಾರ ಸಮಗ್ರ ಯೋಜನಾ ವರದಿಯನ್ನು ಸಲ್ಲಿಸಿದ್ದು, ಕ್ಯಾಬಿನೆಟ್ ಚರ್ಚೆಯಾಗಿ ಅನುಮತಿ ನೀಡಿದ 6 ತಿಂಗಳ ಒಳಗಡೆ ಕೆಲಸ ಪ್ರಾರಂಭಿಸುತ್ತೆವೆ. ಅಲ್ಲದೇ ಯೋಜನೆ ಆರಂಭವಾದ 30 ತಿಂಗಳುಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುತ್ತೆವೆ ಎಂದು ತಿಳಿಸಿದರು.
Advertisement
ಯೋಜನೆ ಜಾರಿ ಸಂಬಂಧ ಹೆಚ್ಚಿನ ಆಸಕ್ತಿ ತೋರಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರಿಗೆ ಧೃವ ಮನೋಜ್ ಪಟೇಲ್ ಧನ್ಯವಾದಗಳನ್ನು ಹೇಳಿದರು.
ಪ್ರತಿ ಕಿಲೋಮೀಟರ್‍ಗೆ 50 ಕೋಟಿ ವೆಚ್ಚವಾಗುವ ಈ ಯೋಜನೆಯನ್ನು ಕಂಪನಿ ತನ್ನ ಟೆಕ್‍ಪಾರ್ಕ್‍ಗೆ ಅನುಕೂಲ ಆಗುವ ರೀತಿಯಲ್ಲಿ ಪಾಡ್ ಟ್ಯಾಕ್ಸಿಯ ಮಾರ್ಗ ಬದಲಾವಣೆ ಮಾಡಿದೆ ಎನ್ನುವ ಆರೋಪ ಈಗ ಕೇಳಿ ಬಂದಿದೆ. ಅಲ್ಲದೇ ಇತ್ತೀಚೆಗೆ ಸಚಿವ ಜಾರ್ಜ್ ಅವರ ಮಗನ ಕಂಪನಿಗೆ ತೊಂದರೆ ಆಗುತ್ತೆ ಎಂದು ಬಿಬಿಎಂಪಿ ಸ್ಕೈವಾಕ್ ನಿರ್ಮಾಣವನ್ನೇ ಬೇರೆಡೆ ಸ್ಥಳಾಂತರ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಈಗ ಸಚಿವ ಜಾರ್ಜ್‍ಗಾಗಿ ಸಹಭಾಗಿತ್ವದ ಕಂಪನಿಗೆ ಪಾಡ್ ಟ್ಯಾಕ್ಸಿ ಗುತ್ತಿಗೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಜಾರ್ಜ್ ಮಗನ ಮೇಲೆ ಸಿಎಂಗೆ ಫುಲ್ ಲವ್ – ಕಾಡಲ್ಲಿ ಸ್ವಂತ ವಾಹನದಲ್ಲಿ ಸವಾರಿಗೆ ಪರ್ಮಿಷನ್
ಟೆಂಡರ್ ಸಲ್ಲಿಕೆಗೆ ಬಿಬಿಎಂಪಿ ಆರಂಭದಲ್ಲಿ ಡಿಸೆಂಬರ್ 30 ಕೊನೆಯ ದಿನ ಎಂದು ಪ್ರಕಟಿಸಿತ್ತು. ಆದರೆ, ಕ್ರಿಸ್‍ಮಸ್ ರಜೆ ಇರುವುದರಿಂದ ಹಾಗೂ ಕೆಲ ಕಾರಣಗಳಿಂದ ಟೆಂಡರ್ ಅವಧಿಯನ್ನು ವಿಸ್ತರಿಸುವಂತೆ ಕಂಪೆನಿಗಳು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಜನವರಿ 10ಕ್ಕೆ ವಿಸ್ತರಣೆಯಾಗಿತ್ತು.
ಸಿಂಗಪುರದ ಆಲ್ಟ್ರಾ ಫೈರ್‍ವುಡ್ ಗ್ರೀನ್ ಟ್ರಾನ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್, ಅಮೆರಿಕದ ಸ್ಕೈ ಟ್ರ್ಯಾನ್ ಏಷಿಯಾ, ಜೆಪಾಡ್ಸ್ ಇಂಕ್ ಕಂಪೆನಿಗಳು ಆಸಕ್ತಿ ತೋರಿದ್ದು, ವಿಸ್ತೃತ ಯೋಜನಾ ವರದಿಗಳನ್ನೂ ಸಲ್ಲಿಸಿವೆ. ಇತ್ತೀಚೆಗೆ ತಾಂತ್ರಿಕ ಬಿಡ್ ನಡೆಯಿತು. ಪಾಡ್ ಟ್ಯಾಕ್ಸಿ ಯೋಜನೆ ಅನುಷ್ಠಾನದಲ್ಲಿ ಕನಿಷ್ಠ 2 ವರ್ಷ ಅನುಭವ ಹೊಂದಿರಬೇಕು ತಾಂತ್ರಿಕವಾಗಿ ಅರ್ಹತೆ ಹೊಂದಿರುವ ಕಂಪೆನಿಗೆ ಟೆಂಡರ್ ನೀಡಲಾಗುತ್ತದೆ ಎಂದು ಈ ಹಿಂದೆ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದರು. ಇದನ್ನೂ ಓದಿ: ಡಿಕೆ ರವಿ, ಗಣಪತಿ ಕೇಸನ್ನು ಪರಿಗಣಿಸಿದ್ದು ಯಾಕೆ: ಪಬ್ಲಿಕ್ ಟಿವಿ ಸಮೀಕ್ಷೆಗೆ ಜಾರ್ಜ್ ಪ್ರಶ್ನೆ
ಏನಿದು ಪಾಡ್ ಟ್ಯಾಕ್ಸಿ?
ಪಾಡ್ ಟ್ಯಾಕ್ಸಿ ಸೇವೆ ಗಂಟೆಗೆ ಸರಾಸರಿ 100 ಕಿ.ಮೀ. ವೇಗದಲ್ಲಿ ಸಂಚರಿಸುವ ಮೂಲಕ ಮೆಟ್ರೊ ರೈಲು ನಿಲ್ದಾಣಗಳಿಗೆ ಪೂರಕ ಸೇವೆ ಒದಗಿಸಲಿದೆ. ಪ್ರತಿ ಪಾಡ್ ಟ್ಯಾಕ್ಸಿ 3 ಮೀಟರ್ ಉದ್ದ, 2.2 ಮೀಟರ್ ಅಗಲವಿದ್ದು, ಕನಿಷ್ಠ 6 ಮಂದಿ ಪ್ರಯಾಣಿಸಬಹುದು. ಪ್ರತಿ ಕಿ.ಮೀ. ಮಾರ್ಗ ನಿರ್ಮಾಣಕ್ಕೆ ಅಂದಾಜು 50 ಕೋಟಿ ರೂ. ವೆಚ್ಚವಾಗಲಿದೆ. ಖಾಸಗಿ ಕಂಪೆನಿಗಳೇ ಸಂಪೂರ್ಣ ಬಂಡವಾಳ ಹೂಡಲಿದ್ದು, ಯೋಜನೆಯ ಆರಂಭವಾದ ನಂತರ 30 ವರ್ಷ ನಿರ್ವಹಣೆ ಮಾಡಲಿವೆ. ಯೋಜನೆ ಅನುಷ್ಠಾನಕ್ಕೆ ಬೇಕಾದ ರಸ್ತೆ ವಿಭಜಕಗಳ ನಡುವೆ ಜಾಗವನ್ನು ಬಿಬಿಎಂಪಿ ನೀಡಲಿದೆ.
ನಗರದಲ್ಲಿ ಮೊದಲ ಹಂತದಲ್ಲಿ ಟ್ರಿನಿಟಿ ಮೆಟ್ರೊ ನಿಲ್ದಾಣದಿಂದ ವೈಟ್‍ಫೀಲ್ಡ್‍ವರೆಗೆ 30 ಕಿ.ಮೀ. ಉದ್ದದ ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ಅಗರ, ದೊಮ್ಮಲೂರು, ಲೀಲಾ ಪ್ಯಾಲೇಸ್ ಹೋಟೆಲ್, ಬಿಇಎಂಎಲ್, ಎಚ್‍ಎಎಲ್ ವಿಮಾನ ನಿಲ್ದಾಣ, ಮಾರತ್ತಹಳ್ಳಿ, ಗಾಂಧಿ ನಗರ, ಬ್ರೋಕ್‍ಫೀಲ್ಡ್, ಪರಿಮಳ ಸನ್‍ರಿಡ್ಜ್, ನಲ್ಲೂರಹಳ್ಳಿ, ವರ್ಜೀನಿಯಾ ಮಾಲ್, ವೈಟ್‍ಫೀಲ್ಡ್ ನಿಲ್ದಾಣಗಳು ಬರಲಿವೆ. ಅಲ್ಲದೇ 2,000ಕ್ಕೂ ಅಧಿಕ ಪಾಡ್ ಟ್ಯಾಕ್ಸಿಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಪ್ರತಿ ಗಂಟೆಗೆ 15 ರಿಂದ 20 ಸಾವಿರ ಜನರು ಪಾಡ್ ಟ್ಯಾಕ್ಸಿ ಸೇವೆಯಲ್ಲಿ ಪ್ರಯಾಣಿಸಬಹುದಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!