ಮುಂಬೈ: ಹಿಂದಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೊಸ ನಿರೂಪಕಿ ಎಂಟ್ರಿ ಕೊಟ್ಟಿದ್ದು, ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಶೋಯಿಂದ ಹೊರ ಬಂದಿದ್ದಾರೆ.
ಸಲ್ಮಾನ್ ಖಾನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಲ್ಮಾನ್ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರ ಬರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಲ್ಮಾನ್ ನರವೈಜ್ಞಾನಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ ಕೋಪ ಮಾಡಿಕೊಳ್ಳದಂತೆ ವೈದ್ಯರು ಸಲ್ಮಾನ್ ಅವರಿಗೆ ಸಲಹೆ ನೀಡಿದ್ದಾರೆ. ಆದರೆ ಪ್ರತಿವಾರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಲ್ಮಾನ್ ಸ್ಪರ್ಧಿಗಳ ವಿರುದ್ಧ ಕೋಪ ಮಾಡಿಕೊಳ್ಳುತ್ತಾರೆ. ಹಾಗಾಗಿ ಸಲ್ಮಾನ್ ಈ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.
ನಿರ್ದೇಶಕಿ, ನಿರ್ಮಾಪಕಿ ಫರ್ಹಾ ಖಾನ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮುಂದಿನ ವಾರಗಳಲ್ಲಿ ಫರ್ಹಾ ಖಾನ್ ಬಿಗ್‍ಬಾಸ್ ನಿರೂಪಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಹಿಂದಿ ಬಿಗ್‍ಬಾಸ್‍ನ 13ನೇ ಆವೃತ್ತಿ ನಡೆಯುತ್ತಿದ್ದು, ಜನವರಿ ತಿಂಗಳಿನಿಂದ ಫರ್ಹಾ ಖಾನ್ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ.
ಸದ್ಯಕ್ಕೆ ಸಲ್ಮಾನ್ ಖಾನ್ ನಟನೆಯ `ದಬಾಂಗ್ 3′ ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರದಲ್ಲಿ ತೊಡಗಿಕೊಂಡಿದೆ. ಪ್ರಭುದೇವ್ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್, ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.