ನವದೆಹಲಿ: ಆಶೀರ್ವಾದ ಪಡೆಯುವ ನೆಪದಲ್ಲಿ ಕಳ್ಳನೋರ್ವ 60 ವರ್ಷದ ವೃದ್ಧೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಈಶಾನ್ಯ ದೆಹಲಿಯ ಜ್ಯೋತಿನಗರದಲ್ಲಿ ನಡೆದಿದೆ.
ಈ ಘಟನೆ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 60 ವರ್ಷದ ವೃದ್ಧೆ ಎಂ.ಎಸ್ ಪ್ರಕಾಶಿ ತನ್ನ ಸೋದರ ಸಂಬಂಧಿಯ ಜೊತೆ ಮನೆಯ ಮುಂದೆ ಕುಳಿತು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಮನೆಯ ಬಳಿ ಬಂದ ಇಬ್ಬರು ವ್ಯಕ್ತಿಗಳು ಸರಗಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ವೃದ್ಧೆ ಎಂ.ಎಸ್ ಪ್ರಕಾಶಿ, ನಾನು ಮತ್ತು ನನ್ನ ಸಂಬಂಧಿ ಮನೆಯ ಮುಂದೆ ಕುಳಿತು ಮಾತನಾಡುತ್ತಿದ್ದೇವು. ಆ ಸಮಯದಲ್ಲಿ ಅಲ್ಲಿಗೆ ಇಬ್ಬರು ಯುವಕರು ಬೈಕಿನಲ್ಲಿ ಬಂದರು ನಂತರ ಅವರು ನಮ್ಮ ಮನೆಯ ಮುಂದೆ ಬೈಕ್ ಪಾರ್ಕ್ ಮಾಡಿ ನಮಗೆ ಅಪಘಾತವಾಗಿದೆ. ಕೈಯಲ್ಲಿ ರಕ್ತ ಬರುತ್ತಿದೆ ಸ್ವಲ್ಪ ಅರಿಶಿನ ಕೊಡಿ ಎಂದು ಕೇಳಿದರು. ನಾನು ಅರಿಶಿನ ತರಲು ಮನೆಯೊಳಗೆ ಹೋದೆ.
ನಾನು ಅರಿಶಿನ ತೆಗೆದುಕೊಂಡು ಬಂದಾಗ ಒಬ್ಬ ಮನೆಯ ಗೇಟಿನ ಒಳಗೆ ಬಂದಿದ್ದರೆ ಇನ್ನೊಬ್ಬ ಬೈಕಿನ ಮೇಲೆ ಕುಳಿತ್ತಿದ್ದ. ನಾನು ಅವನಿಗೆ ಅರಿಶಿನ ಕೊಟ್ಟೆ ಆತ ಅದನ್ನು ಕೈಗೆ ಹಾಕಿಕೊಂಡು, ನಿಮ್ಮಿಂದ ತುಂಬಾ ಉಪಕರವಾಯಿತು ಆಶೀರ್ವಾದ ಮಾಡಿ ಎಂದು ನನ್ನ ಕಾಲಿಗೆ ಬಿದ್ದ. ಆಗ ನಾನು ಸ್ವಲ್ಪ ಮುಂದೆ ಬಗ್ಗಿ ಅಶೀರ್ವಾದ ಮಾಡುತ್ತಿದ್ದಾಗ ಆತ ಸರವನ್ನು ಕಿತ್ತುಕೊಂಡು ನನ್ನನ್ನು ತಳ್ಳಿ ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ವೃದ್ಧೆ ಹೇಳಿದ್ದಾರೆ.
ಈ ಸಂಬಂಧ ಜ್ಯೋತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ.