ನವದೆಹಲಿ: ಸೋನಿಯಗಾಂಧಿ, ಸಿದ್ದರಾಮಯ್ಯ ಭೇಟಿ ಬಳಿಕ ಭಾರಿ ಲೆಕ್ಕಚಾರದೊಂದಿಗೆ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ತೀವ್ರ ಹಿನ್ನಡೆಯಾಗಿದೆ.
ಕಳೆದ ಐದು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿದ್ದ ಡಿ.ಕೆ.ಶಿವಕುಮಾರ್ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಹೈಕಮಾಂಡ್ ಭೇಟಿಯಾಗದೆ ಇಂದು ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿ ಮತ್ತು ರಾಹುಲ್ ಗಾಂಧಿ ಭೇಟಿಗಾಗಿ ದೆಹಲಿಗೆ ತೆರಳಿದ್ದರು. ಸೋನಿಯಗಾಂಧಿ ಆಪ್ತ ಅಹ್ಮದ್ ಪಟೇಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಮೂಲಕ ಭೇಟಿಗೆ ಪ್ರಯತ್ನ ಮಾಡಿದರು. ಆದರೆ ಸೋನಿಯಗಾಂಧಿ ಮಾತ್ರ ಭೇಟಿ ಸಮಯ ನೀಡಿಲ್ಲ. ಇದರಿಂದ ಬೇಸರಗೊಂಡಿರುವ ಡಿಕೆಶಿ ಇಂದು ಬೆಂಗಳೂರಿಗೆ ವಾಪಸಾಗಿದ್ದಾರೆ.
ಜನವರಿ 14 ರಂದು ಸೋನಿಯಗಾಂಧಿ ಭೇಟಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಂತೆ ಮನವಿ ಮಾಡಿದರು. ಬದಲಿಗೆ ಲಿಂಗಾಯತ ನಾಯಕ ಎಂ.ಬಿ ಪಾಟೀಲ್‍ಗೆ ಮಣೆ ಹಾಕುವಂತೆ ಕೇಳಿಕೊಂಡಿದ್ದರು. ಒಂದು ವೇಳೆ ಡಿ.ಕೆ ಶಿವಕುಮಾರ್ ಅಂತಿಮ ಅನ್ನೊದಾದರೆ ಪ್ರಾಂತ್ಯ ಮತ್ತು ಜಾತಿ ಆಧಾರದ ಮೇಲೆ ನಾಲ್ಕು ಕಾರ್ಯಾಧ್ಯಕ್ಷರನ್ನು ನೇಮಿಸುವಂತೆ ಸಲಹೆ ನೀಡಿದ್ದರು ಎನ್ನಲಾಗಿತ್ತು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಡಿ.ಕೆ ಶಿವಕುಮಾರ್ ನೇರವಾಗಿ ಸೋನಿಯಗಾಂಧಿ ಭೇಟಿಗೆ ಮುಂದಾಗಿದ್ದರು. ಭೇಟಿ ವೇಳೆ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸುವ ಲೆಕ್ಕಾಚಾರದಲ್ಲಿದ್ದರು. ಆದರೆ ಐದು ದಿನಗಳಿಂದ ಸಮಯ ಕೇಳಿದರೂ ದೆಹಲಿ ಚುನಾವಣೆ ಹಿನ್ನೆಲೆ ಭೇಟಿಗೆ ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್ ಮೂಲಗಳ ಸ್ಪಷ್ಟಪಡಿಸಿವೆ. ಹೀಗಾಗಿ ಸಾಕಷ್ಟು ನಿರೀಕ್ಷೆ ಹೊತ್ತು ಹೈಕಮಾಂಡ್ ಮನೆ ಬಾಗಿಲಿಗೆ ತೆರಳಿದ್ದ ಡಿ.ಕೆ ಶಿವಕುಮಾರ್ ಇದೊಂದು ರೀತಿಯಲ್ಲಿ ಹಿನ್ನಡೆಯಾದಂತಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.