ನವದೆಹಲಿ: ಹೊಸ ಮೋಟಾರು ಕಾಯ್ದೆ ಬಂದ ನಂತರ ದಂಡದಿಂದ ತಪ್ಪಿಸಿಕೊಳ್ಳಲು ರಾಷ್ಟ್ರ ರಾಜಧಾನಿಯಲ್ಲಿ ಕ್ಯಾಬ್ ಚಾಲಕರು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಟ್ಟುಕೊಂಡು ಓಡಾಡುತ್ತಿದ್ದಾರೆ.
ಹೌದು, ಕೇಂದ್ರ ಸರ್ಕಾರದ ಹೊಸ ಸಂಚಾರಿ ನಿಯಮದ ಬಗ್ಗೆ ವಿಧಿಸಲಾಗಿರುವ ಭಾರೀ ದಂಡವನ್ನು ತಿಳಿದುಕೊಂಡು ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಚಾಲಕರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ದಂಡದ ನಿಯಮಗಳ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ನಾನಾ ಸಂದೇಶಗಳು ಹರಿದಾಡುತ್ತಿದ್ದು, ಸಂಚಾರಿ ನಿಯಮದ ಪ್ರಕಾರ ಕ್ಯಾಬ್ ಡ್ರೈವರ್ ಗಳು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಟ್ಟಿಕೊಳ್ಳಬೇಕು ಇಲ್ಲವಾದರೆ ಭಾರೀ ದಂಡ ಕಟ್ಟಬೇಕಾಗುತ್ತದೆ ಎಂಬ ಗಾಳಿ ಸುದ್ದಿ ಹಬ್ಬಿದೆ. ಇದನ್ನೇ ನಂಬಿದ ಕ್ಯಾಬ್ ಚಾಲಕರು ಕಾರಿನಲ್ಲಿ ಕಾಂಡೋಮ್ ಇಟ್ಟುಕೊಂಡು ಕಾರು ಚಾಲನೆ ಮಾಡುತ್ತಿದ್ದಾರೆ.
ದೆಹಲಿ ಕಾರು ಚಾಲಕ ರಮೇಶ್ ಪಾಲ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ಬಹಳ ಗೊಂದಲವಿದೆ. ಕಾರಿನಲ್ಲಿ ಕಡ್ಡಾಯವಾಗಿ ಕಾಂಡೋಮ್ ಇಟ್ಟಿರಬೇಕು ಎಂಬ ನಿಯಮದ ಬಗ್ಗೆ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಆದರೆ ಇತರ ಕ್ಯಾಬ್ ಚಾಲಕರು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಡಬೇಕು ಇಲ್ಲವಾದರೆ ದಂಡ ಹಾಕುತ್ತಾರೆ ಎಂದು ಹೇಳಿದರು. ಅದಕ್ಕಾಗಿಯೇ ನಾನು ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಕಾಂಡೋಮ್ ಇಡುವ ವಿಚಾರದಲ್ಲಿ ಬೇರೆಯದೇ ಕಾರಣ ಹೇಳುವ ಕೆಲ ಕಾರು ಚಾಲಕರು, ನಾವು ಕಾಂಡೋಮ್ ಇಡುವುದು ಪೊಲೀಸರು ದಂಡ ವಿಧಿಸುತ್ತಾರೆ ಎಂದು ಅಲ್ಲ. ಕಾಂಡೋಮ್ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಬಳಸಿಕೊಳ್ಳಲು ಇಟ್ಟಿಕೊಂಡಿರುತ್ತೇವೆ. ಏನಾದರೂ ಅಪಘಾತವಾದರೆ ಮೂಳೆ ಮುರಿದರೆ ಆ ಜಾಗಕ್ಕೆ ಕಾಂಡೋಮ್‍ನನ್ನು ಕಟ್ಟಿ ರಕ್ತಸ್ರಾವವನ್ನು ತಡೆಯಬಹುದು ಎಂದು ಹೇಳಿದ್ದಾರೆ.
ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ ಎಲ್ಲಾ ಸಮಯದಲ್ಲೂ ಮೂರು ಕಾಂಡೋಮ್‍ಗಳನ್ನು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ. ಏಕೆಂದರೆ ಒಬ್ಬ ವ್ಯಕ್ತಿಗೆ ಗಾಯವಾಗಿ ರಕ್ತಸ್ರಾವವಾದರೆ ರಕ್ತ ಬಾರದಂತೆ ಕಟ್ಟಲು ಕಾಂಡೋಮ್ ಉಪಯೋಗಕ್ಕೆ ಬರುತ್ತದೆ. ಅದೇ ರೀತಿ ಮೂಳೆ ಮುರಿದು ಹೋದರೆ ಅವರು ಆಸ್ಪತ್ರೆ ತಲುಪುವವರೆಗೆ ಆ ಪ್ರದೇಶದ ಸುತ್ತಲೂ ಕಾಂಡೋಮ್ ಅನ್ನು ಕಟ್ಟಬಹುದು. ಈ ಎಲ್ಲಾ ಕಾರಣದಿಂದ ಕಾಂಡೋಮ್ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ದೆಹಲಿಯ ಸರ್ವೋದಯ ಚಾಲಕ ಸಂಘದ ಅಧ್ಯಕ್ಷ ಕಮಲ್ಜೀತ್ ಗಿಲ್ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ದೆಹಲಿ ಪೊಲೀಸ್ ಅಧಿಕಾರಿಗಳನ್ನು ಕೇಳಿದರೆ, ಕಾರಿನಲ್ಲಿ ಕಾಂಡೋಮ್ ಇಟ್ಟುಕೊಳ್ಳಬೇಕು ಎಂಬ ಯಾವುದೇ ನಿಯಮವಿಲ್ಲ. ನಾವು ತಪಾಸಣಾ ಸಮಯದಲ್ಲಿ ಇದರ ಬಗ್ಗೆ ಕೇಳುವುದು ಇಲ್ಲ. ಆದರೆ ಕೆಲ ಎನ್‍ಜಿಒ ಸಂಸ್ಥೆಗಳು ಸುರಕ್ಷಿತ ಲೈಂಗಿಕತೆಯ ಬಗ್ಗೆ ಜಾಗೃತಿ ಮೂಡಿಸುವಾಗ ಚಾಲಕರು ಕಾರಿನಲ್ಲಿ ಕಾಂಡೋಮ್ ಇಟ್ಟುಕೊಂಡಿರಬೇಕು ಎಂದು ಹೇಳುತ್ತಾರೆ. ಈ ಸುದ್ದಿಯೇ ಗಾಳಿ ಸುದ್ದಿಯಾಗಿ ಹಬ್ಬಿರಬಹುದು ಎಂದು ಹೇಳಿದ್ದಾರೆ.