– ಹೈಕಮಾಂಡ್ ಭೇಟಿಗೆ ಉ.ಕರ್ನಾಟಕ ಶಾಸಕರ ಯತ್ನ
ನವದೆಹಲಿ: ಕೊರೊನಾ ವೈರಸ್ ಸೋಂಕು ತಡೆಗೆ ಸಿಎಂ ಬಿಎಸ್‍ವೈ ನೇತೃತ್ವದ ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದ್ದರೆ, ಇತ್ತ ಸದ್ದಿಲ್ಲದೆ ಅವರ ವಿರುದ್ಧವೇ ದೂರು ನೀಡಲು ಶಾಸಕರ ಬಣವೊಂದು ಸಿದ್ಧವಾಗಿದೆ.
ಮಂತ್ರಿಗಿರಿಗಾಗಿ ಸಿಗದೆ ಅತೃಪ್ತಗೊಂಡಿರುವ ಮಾಜಿ ಸಚಿವ ಶಾಸಕ ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ ಸೇರಿ ಉತ್ತರ ಕರ್ನಾಟಕದ ಕೆಲ ನಾಯಕರು ದೆಹಲಿ ತೆರಳಿದ್ದು ಹೈಕಮಾಂಡ್ ಭೇಟಿಗೆ ಪ್ರಯತ್ನ ನಡೆಸಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಕೆಲ ಕೇಂದ್ರ ಸಚಿವರ ಭೇಟಿ ಮಾಡಿರುವ ನಾಯಕರು ಕೇಂದ್ರ ಸಚಿವರ ಮೂಲಕ ಹೈಕಮಾಂಡ್ ಭೇಟಿಗೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಇದರೆ ಇದುವರೆಗೂ ಹೈಕಮಾಂಡ್ ಭೇಟಿಗೆ ಅವಕಾಶ ನೀಡಿಲ್ಲ.
ಹೈಕಮಾಂಡ್ ಭೇಟಿಗೆ ಅವಕಾಶ ನೀಡಿದ್ದಲ್ಲಿ ಸಿಎಂ ಬಿಎಸ್‍ವೈ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಜೆಪಿ ಶಾಸಕರಲ್ಲಿ ಸೃಷ್ಟಿಯಾಗಿರುವ ಅಸಮಾಧಾನ ಹೊರ ಹಾಕುವ ಸಾಧ್ಯತೆ ಇದೆ. ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಹೈಕಮಾಂಡ್ ಮುಂದೆ ಬಿಎಸ್‍ವೈ ಕಾರ್ಯವೈಖರಿ ಬಗ್ಗೆ ಕಂಪ್ಲೆಂಟ್ ನೀಡಲು ನಿರಾಣಿ ಹಾಗೂ ಗ್ಯಾಂಗ್ ಯತ್ನ ನಡೆದಿದೆ.
ಇದೇ ವೇಳೆ ಬಸನಗೌಡ ಪಾಟೀಲ್, ಮುರುಗೇಶ್ ನಿರಾಣಿ ಮಂತ್ರಿಗಿರಿ ಸ್ಥಾನ ನೀಡುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಒಂದು ಸ್ಥಾನ ನೀಡುವಂತೆ ಇತರೆ ಉತ್ತರ ಕರ್ನಾಟಕ ಶಾಸಕರೊಂದಿಗೆ ತೆರಳಿ ಬೇಡಿಕೆ ಇಡುವ ಸಾಧ್ಯದೆ ಎನ್ನಲಾಗಿದೆ.